ಶ್ರೀನಗರ, ಆ 10 (DaijiworldNews/PY): "ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು" ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ತುಲ್ಲಮುಲ್ಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭೂಮಿ ಸೇರಿದಂತೆ ಉದ್ಯೋಗದ ಹಕ್ಕು ಕಾಶ್ಮೀರಿ ನಿವಾಸಿಗಳಿಗೆ ಸಿಗಬೇಕು" ಎಂದು ತಿಳಿಸಿದ್ದಾರೆ.
"ಕೂಡಲೇ ವಿಧಾನಸಭೆ ಚುನಾವಣೆ ನಡೆಸಬೇಕು. ಆದರೆ, ಚುನಾವಣೆ ನಡೆಯುವ ಮುನ್ನ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು. ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಿದಾಗ ನೂತನ ಕಾನೂನಿನ ಮೂಲಕ ಮೊದಲಿನಂತೆ ನಮ್ಮ ಭೂಮಿ ಹಾಗೂ ಉದ್ಯೋಗ ಭದ್ರಪಡಿಸಬೇಕು" ಎಂದಿದ್ದಾರೆ.
"ಉಗ್ರರ ದಾಳಿಯ ಕಾರಣ 1990ರ ದಶಕದ ಪ್ರಾರಂಭದಲ್ಲಿ ಕಣಿವೆ ತೊರೆದ ಕಾಶ್ಮೀರಿ ಪಂಡಿತರನ್ನು ಮರಳಿ ತರಬೇಕು" ಎಂದು ತಿಳಿಸಿದ್ದಾರೆ.