ನವದೆಹಲಿ, ಆ.10(DaijiworldNews/HR): ಪೆಗಾಸಸ್ ಗೂಢಚರ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಎಲ್ಲ ಸಚಿವರು ಮತ್ತು ಇಲಾಖೆಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರಿಸಬಹುದಿತ್ತು, ಆದರೆ ಅವರು ಈ ವಿಷಯದಲ್ಲಿ ಯಾಕೆ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚಿದಂಬರಂ, "ಎನ್ಎಸ್ಒ ಸಮೂಹದೊಂದಿಗೆ ಯಾವುದೇ ವ್ಯವಹಾರ ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದ್ದು, ಒಂದು ಸಚಿವಾಲಯ/ ಇಲಾಖೆಯಾಗಿ ಅವರ ಹೇಳಿಕೆ ಸರಿ ಇರಬಹುದು. ಆದರೆ, ಈ ವಿಚಾರದಲ್ಲಿ ಸರ್ಕಾರದಲ್ಲಿರುವ ಹಲವು ಸಚಿವಾಲಯಗಳು, ಇಲಾಖೆಗಳ ಮೇಲೆ ಶಂಕೆ ಇದೆ. ಅವುಗಳ ಬಗ್ಗೆ ಯಾರು ಪ್ರತಿಕ್ರಿಯೆ ನೀಡುತ್ತಾರೆ? ಆ ಸಚಿವಾಲಯ/ ಇಲಾಖೆಗಳ ಪರವಾಗಿ ಪ್ರಧಾನಮಂತ್ರಿ ಮಾತ್ರ ಉತ್ತರಿಸಬಹುದು. ಅವರು ಯಾಕೆ ಮೌನವಾಗಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.
ಇನ್ನು ಇಸ್ರೇಲ್ನ ಎನ್ಎಸ್ಒ ಕಂಪನಿಯ ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶ ಬಳಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಕೆಲವು ಉದ್ಯಮಿಗಳು, 40 ಪತ್ರಕರ್ತರು ಹಾಗೂ 00 ಕ್ಕೂ ಅಧಿಕ ಭಾರತೀಯರ ಮೊಬೈಲ್ ಫೋನ್ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿತ್ತು ಎನ್ನಲಾಗಿದೆ.