ಬೆಂಗಳೂರು, ಆ 10 (DaijiworldNews/PY): "ಆಯಾಯ ರಾಜ್ಯಗಳಿಗೆ ಹಿಂದುಳಿದ ವರ್ಗಗಳ ಪಟ್ಟಿ ರಚನೆ ಅಧಿಕಾರವನ್ನು ನೀಡಿದ ಕೇಂದ್ರದ ನಿರ್ಧಾರವನ್ನು ಸ್ವಾಗತಿಸುತ್ತೇನೆ" ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಹಿಂದುಳಿದ ವರ್ಗಕ್ಕೆ ಹೆಚ್ಚಿನ ಅವಕಾಶ ನೀಡಿದೆ. ಅಲ್ಲದೇ ಸಮುದಾಯಕ್ಕೂ ಬಿಜೆಪಿ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಿದೆ" ಎಂದು ಹೇಳಿದರು.
"ಶೇ 27ರಷ್ಟು ವೈದ್ಯಕೀಯ ಸೀಟುಗಳಲ್ಲಿ ಮೀಸಲಾತಿ ನೀಡಿದೆ. ಕಾಂಗ್ರೆಸ್ ಕೇವಲ ಮಾತಿನಲ್ಲಿ ಮಾತ್ರವೇ ಹೇಳುತ್ತಿತ್ತು. ಆದರೆ, ಬಿಜೆಪಿ ಆ ಕೆಲಸವನ್ನು ಮಾಡಿ ತೋರಿಸಿದೆ. ಯಾವುದೇ ರೀತಿಯಾದ ರಾಜಕೀಯ ಮಾಡದೇ ಮಲ್ಲಿಕಾರ್ಜುನ ಖರ್ಗೆ ಅವರಂತವರು ಸ್ವಾಗತ ಮಾಡಿದ್ದಾರೆ" ಎಂದು ತಿಳಿಸಿದರು.
"ಈ ಸಮಾಜದಲ್ಲಿ ಕೆಲವು ಖಾತೆ ಪ್ರಭಾವಿ, ಕೆಲವು ಖಾತೆ ಪ್ರಭಾವಿ ಅಲ್ಲ ಎನ್ನುವ ಭಾವನೆ ಬಂದಿದೆ. ಖಾತೆ ಹಂಚಿಕೆ ವಿಚಾರವಾಗಿ ಕೆಲವರಿಗೆ ಬೇಸರ ಆಗುವುದು ಸಹಜವಾಗಿದ್ದು, ಅದು ಶೀಘ್ರವೇ ಸರಿಯಾಗಲಿದೆ" ಎಂದರು.
"ಬಿಜೆಪಿ ಪಕ್ಷ ಹೇಳೋರು ಕೇಳೋರು ಇರುವ ಪಕ್ಷ. ಹಲವರು ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದಾರೆ. ನಾವು 105 ಶಾಸಕರ ತ್ಯಾಗದಿಂದ ಸಚಿವರಾಗಿದ್ದೇವೆ ಎನ್ನುವ ಮುನಿರತ್ನ ಅವರ ಮಾತನ್ನು ನಾನು ಮೆಚ್ಚುತ್ತೇನೆ. 105 ಸ್ಥಾನಗಳನ್ನು ಗೆಲ್ಲಲು ಎಲ್ಲರೂ ಪ್ರಯತ್ನಿಸಿದ್ದಾರೆ" ಎಂದು ಹೇಳಿದರು.