ಬೆಂಗಳೂರು, ಆ 10 (DaijiworldNews/MS): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಹಾಸನ ಶಾಸಕ ಪ್ರೀತಂ ಗೌಡ ಆ.10 ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಸಿಎಂ ಬೊಮ್ಮಾಯಿ ಅಡ್ಜಸ್ಟ್ ಮೆಂಟ್ ಸರ್ಕಾರ ನಡೆಸಿದರೆ ಹೇಗೆ ? ಹೊಂದಾಣಿಕೆ ರಾಜಕೀಯ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಮೈಸೂರು ಭಾಗದಲ್ಲಿ ಜೆಡಿಎಸ್ ವಿರೋಧಿಯಾಗಿ ರಾಜಕಾರಣ ಮಾಡುತ್ತಿದ್ದೇವೆ. ನಾವು ಇಲ್ಲಿ ಹೊಡೆದಾಡಿ ಪಕ್ಷವನ್ನು ಸಂಘಟಿಸುತ್ತೇವೆ. ಆದರೆ ನೀವು ಜೆಡಿಎಸ್ನೊಂದಿಗೆ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡುತ್ತೀರಿ ಎಂದು ಶಾಸಕ ಪ್ರೀತಂ ಗೌಡ ಹರಿಹಾಯ್ದಿದ್ದರು.
ಸಿಎಂ ಬೊಮ್ಮಾಯಿ ಅವರು ಹೆಚ್ ಡಿಡಿ ಅವರನ್ನು ಭೇಟಿ ಮಾಡಿದ್ದಕ್ಕೆ ಪ್ರೀತಂ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ರಾಜಕೀಯವಾಗಿ ಹಲವು ಹೇಳಿಕೆಗಳಿಗೆ ಕಾರಣವಾಗಿತ್ತು. ಇದೀಗ ಸ್ವತಃ ಬೊಮ್ಮಾಯಿ ಅವರು ಪ್ರೀತಂಗೌಡರನ್ನು ಕರೆಸಿಕೊಂಡಿದ್ದಾರೆ.
ಪ್ರೀತಂ ಗೌಡ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ಅವರಿಗೆ ರಾಜಕೀಯ ತಿಳುವಳಿಕೆ ಕೊರತೆ. ಪ್ರೀತಂ ನನ್ನ ಯುವ ಗೆಳೆಯನಾಗಿದ್ದು ಅವರನ್ನ ಕರೆದು ಮಾತನ್ನಾಡುತ್ತೇನೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಇಂದು ಬೆಳಗ್ಗೆ ಹೇಳಿದ್ದರು.