ಬೆಂಗಳೂರು, ಆ.10(DaijiworldNews/HR): ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದು, ಬಿಜೆಪಿ ಸರ್ಕಾರವು ಅವರಿಗೆ ಪರಿಹಾರ ನೀಡದೆ ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆತುರಕ್ಕೆ ಬಿದ್ದು ತಾವು ಟೀಕೆ ಮಾಡುವುದಿಲ್ಲ. ಹೊಸ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು" ಎಂದರು.
ಇನ್ನು "ಈ ಹಿಂದೆ ಆರ್ಥಿಕ ನೆರವು ಘೋಷಿಸಿದ ಸರ್ಕಾರ ಅದನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸಿಲ್ಲ. ಮುಂದಿನ ದಿನಗಳಲ್ಲಾದರೂ ವೃತ್ತಿನಿರತರಿಗೆ, ರೈತರಿಗೆ ಯಾವ ರೀತಿ ಸಹಾಯ ಮಾಡಲಿದೆ ಎಂದು ಕಾದು ನೋಡುತ್ತೇವೆ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿಯವರು ಉತ್ತರ ಕರ್ನಾಟಕದವರೇ ಆಗಿದ್ದು, ಆ ಭಾಗದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಹೊಸ ಸರ್ಕಾರ ತಕ್ಷಣ ಸಂತ್ರಸ್ಥರ ನೆರವಿಗೆ ಧಾವಿಸಬೇಕು" ಎಂದಿದ್ದಾರೆ.