ರಾಮನಗರ, ಆ 10 (DaijiworldNews/PY): 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಫೈಟ್ ಅಸಿಸ್ಟೆಂಟರ್ ವಿವೇಕ್ (35) ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ ಸೇರಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್ ಹಾಗೂ ಕ್ರೇನ್ ಚಾಲಕ ಮುನಿಯಪ್ಪ ಅವರನ್ನು ಆಗಸ್ಟ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರಾಮನಗರದ ಬಿಡದಿ ಹೋಬಳಿಯ ಜೋಗರಪಾಳ್ಯದಲ್ಲಿ ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ಐದು ದಿನಗಳಿಂದ ನಡೆಯುತ್ತಿತ್ತು. ಸೋಮವಾರ ಶೂಟಿಂಗ್ನ ಕೊನೆಯ ದಿನವಾಗಿದ್ದು, ಸಾಹಸ ದೃಶ್ಯ ಚಿತ್ರೀಕರಣದ ಸಂದರ್ಭ ವಿದ್ಯುತ್ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಇದರಲ್ಲಿ ತಮಿಳುನಾಡು ಮೂಲದ ಫೈಟರ್ ವಿವೇಕ್ ಸಾವನ್ನಪ್ಪಿದ್ದು, ಮತ್ತೋರ್ವ ರಂಜಿತ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಸಾಹಸ ದೃಶ್ಯ ಚಿತ್ರೀಕರಣ ಸಂದರ್ಭ ಮೆಟಲ್ ರೋಪ್ ಬಳಕೆ ಮಾಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇನ್ನೊಂದೆಡೆ ಸಿನಿಮಾ ನಿರ್ಮಾಪಕ ಗುರುದೇಶಪಾಂಡೆ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳಾದ ವಿನೋದ್ ಕುಮಾರ್, ಶಂಕರಯ್ಯ ಹಾಗೂ ಮಹದೇವ್ ಅವರನ್ನು ಮಂಗಳವಾರ ಬೆಳಗ್ಗೆ ಬಿಡದಿ ಠಾಣೆ ಪಿಎಸ್ಐ ಭಾಸ್ಕರ್ ಅವರು ರಾಮನಗರ ಸಿವಿಲ್ ನ್ಯಾಯಾಲಯಕ್ಕೆ ಕರೆತಂದಿದ್ದರು. ಮೂವರು ಆರೋಪಿಗಳಿಗೆ ನ್ಯಾಯಾಧೀಶೆ ಅನುಪಮಾ ಲಕ್ಷ್ಮೀ ಅವರು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ.