ಬೆಂಗಳೂರು, ಆ.10(DaijiworldNews/HR): "ಪೊಲೀಸರು ಭೂ ಮಾಫಿಯಾದೊಂದಿಗೆ ಕೈಜೋಡಿಸುವುದನ್ನು ಸಹಿಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದೇ ನಮ್ಮ ಸರ್ಕಾರದ ಆದ್ಯತೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೊಲೀಸ್ ಇಲಾಖೆ ವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ಹೊಸ ಸರ್ಕಾರದಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂದು ಹೇಳಿದ್ದೇವೆ. ದಕ್ಷತೆ, ಪ್ರಾಮಾಣಿಕತೆ ಇನ್ನೂ ಹೆಚ್ಚಾಗಬೇಕು. ಜನಸ್ನೇಹಿ ಆಗಿ ಕೆಲಸ ಮಾಡಬೇಕು. ಅಪರಾಧಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು" ಎಂದಿದ್ದಾರೆ.
ಇನ್ನು ಕೊರೊನಾ ನಿರ್ವಹಣೆ ಸಂದರ್ಭದಲ್ಲಿ ಏನೇನು ಸವಾಲುಗಳಿವೆ ಎನ್ನುವುದನ್ನು ಹೇಳಿದ್ದು, ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ ಏನೇನಿದೆ ಅದನ್ನು ಮುಂದುವರೆಸುವ ಭರವಸೆ ನೀಡಿದ್ದೇನೆ" ಎಂದು ಹೇಳಿದ್ದಾರೆ.