ಬೆಂಗಳೂರು, ಆ 10 (DaijiworldNews/PY): "ಅಧಿಕಾರ ದಾಹದ ಆಂತರಿಕ ಕಚ್ಚಾಟದಲ್ಲಿರುವ ಸರ್ಕಾರ, ನೆರೆ, ಕರೋನಾವನ್ನೂ ಮರೆತಿದೆ, ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ" ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸ್ವತಂತ್ರಕ್ಕೆ ಸಣ್ಣ ಕೊಡುಗೆಯೂ ಇಲ್ಲದ ಬಿಜೆಪಿ ಪಕ್ಷ ಸ್ವಾತಂತ್ರ್ಯೋತ್ಸವವನ್ನು ಗೌರವಿಸುವುದೂ ಅರಿತಿಲ್ಲ. ತ್ಯಾಗ, ಬಲಿದಾನಗಳಿಂದ ಸಿಕ್ಕ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಸರ್ಕಾರ ಕಡೆಗಣಿಸಿದ್ದು ಅಕ್ಷಮ್ಯ. ಅಧಿಕಾರ ದಾಹದ ಆಂತರಿಕ ಕಚ್ಚಾಟದಲ್ಲಿರುವ ಸರ್ಕಾರ, ನೆರೆ, ಕರೋನಾವನ್ನೂ ಮರೆತಿದೆ, ಸ್ವಾತಂತ್ರ್ಯೋತ್ಸವವನ್ನೂ ಮರೆತಿದೆ" ಎಂದಿದೆ.
"ಭಾರತ ಸ್ವತಂತ್ರಗೊಂಡಾಗ ನೂರಾರು ಸವಾಲುಗಳಿದ್ದವು, ಸಂಪನ್ಮೂಲಗಳ ಕೊರತೆ ಇತ್ತು. ದೇಶದ ಮೊದಲ ಬಜೆಟ್ ಗಾತ್ರ ಕೇವಲ 197.39 ಕೋಟಿ ಮಾತ್ರವಾಗಿತ್ತು. ಇಂದು ದೇಶದ ಬಜೆಟ್ನ್ನು ಲಕ್ಷ ಕೋಟಿಗಳಿಗೆ ತಂದಿದ್ದು ಕಾಂಗ್ರೆಸ್. ಅಂದು ಬ್ರಿಟೀಷರ ಪರವಾಗಿದ್ದವರ ಸಂತತಿಯೇ ಇಂದು ಅಧಿಕಾರಕ್ಕೇರಿ ದೇಶವನ್ನ ಲೂಟಿ ಹೊಡೆಯುತ್ತಿದ್ದಾರೆ" ಎಂದು ಆರೋಪಿಸಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಅದರಂತೆ ಎಲ್ಲಾ ರಾಜ್ಯ ಸರ್ಕರಗಳು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಣೆಗೆ ಕಾರ್ಯಕ್ರಮಗಳನ್ನು ರೂಪಿಸಲು ಸೂಚನೆ ನೀಡಿದೆ. ಆದರೆ, ಈ ಸಲುವಾಗಿ ರಾಜ್ಯ ಸರ್ಕಾರ ಮಾತ್ರ ಯಾವುದೇ ಯೋಜನೆ ರೂಪಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪ ಕೇಳಿಬರುತ್ತಿದೆ.