ಮುಂಬೈ, ಆ 10 (DaijiworldNews/MS): ಶಾಲಾ ಅಧ್ಯಯನನ ವಿಚಾರವಾಗಿ ಗಮನಕೊಡುವಂತೆ ಒತ್ತಡ ಹಾಕಿದ ತಾಯಿಯೊಂದಿಗೆ ಜಗಳವಾಡಿದ 15ರ ಹರೆಯದ ಬಾಲಕಿಯೂ, ಕರಾಟೆ ಬೆಲ್ಟ್ ನಿಂದ ಹೆತ್ತ ತಾಯಿಯ ಕತ್ತು ಹಿಚುಕಿ ಹತ್ಯೆ ಮಾಡಿರುವ ಹೇಯ ಘಟನೆ ನವಿ ಮುಂಬೈನಲ್ಲಿ ನಡೆದಿದೆ.
ಜುಲೈ 30 ರಂದು ನವಿ ಮುಂಬೈನ ಐರೋಲಿ ಪ್ರದೇಶದಲ್ಲಿ40 ವರ್ಷದ ಮಹಿಳೆಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸತ್ತಿದ್ದಾರೆ ಎಂದು ಆಕೆಯ 15 ವರ್ಷದ ಮಗಳು ಹೇಳಿಕೆ ನೀಡಿದ್ದಳು. ಪೊಲೀಸರು ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಮೃತದೇಹದ ವಿಧಿವಿಜ್ಞಾನ ಪರೀಕ್ಷೆಯ ವರದಿಯಲ್ಲಿ ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಇದು ಪೊಲೀಸರನ್ನು ಬೆಚ್ಚಿಬೀಳಿಸಿದ್ದು, ಬಳಿಕ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಮಗಳು ವೈದ್ಯಕೀಯ ಕೋರ್ಸ್ ಮಾಡಬೇಕು ಎಂಬ ಆಸೆ ತಾಯಿಗಿದ್ದು ಇದಕ್ಕಾಗಿ ಬಾಲಕಿಗೆ ಓದುವಂತೆ ಒತ್ತಡ ಹಾಕುತ್ತಿದ್ದರು. ಈ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಜಗಳವಾಗುತ್ತಿತ್ತು. ತಾಯಿಯನ್ನು ಸಾಯುಸುವುದಕ್ಕೂ ಒಂದು ತಿಂಗಳ ಹಿಂದೆ, ಓದುವ ವಿಚಾರವಾಗಿ ತಾಯಿ ತನಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು. ಆ ಸಂದರ್ಭದಲ್ಲಿ ಪೊಲೀಸರು ಮನೆಯವರನ್ನು ಕರೆಸಿ ಸಮಾಲೋಚನೆ ನಡೆಸಿ ಕುಟುಂಬಸ್ಥರಿಗೆ ತಿಳಿ ಹೇಳಿದ್ದರು.
ವಿಚಾರಣೆಯ ಸಮಯದಲ್ಲಿ, ಬಾಲಕಿ ತನ್ನ ತಾಯಿಯೊಂದಿಗೆ ಜಗಳವಾಡಿದ ನಂತರ ತನ್ನ ತಾಯಿಯನ್ನು ಕರಾಟೆ ಬೆಲ್ಟ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಒಪ್ಪಿಕೊಂಡಿದ್ದು ಬಾಲಕಿಯನ್ನು ಸೋಮವಾರ ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.