ನವದೆಹಲಿ, ಆ 10 (DaijiworldNews/PY): ದೆಹಲಿಯ ಜಂತರ್ ಮಂತರ್ ಬಳಿ ಬಿಜೆಪಿ ಪ್ರತಿಭಟನೆ ನಡೆಸಿದ ವೇಳೆ ಮುಸ್ಲಿಂ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಶ್ವಿನಿ ಉಪಾಧ್ಯಾಯ ಹಾಗೂ ಇತರೆ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನಿ ಉಪಾಧ್ಯಾಯಗೆ ವಿಚಾರಣೆಗೆ ಹಾಜರಾಗುವಂತೆ ಕೊನ್ನಾಟ್ ಪ್ಲೇಸ್ ಪೊಲೀಸ್ ಠಾಣೆ ಸೋಮವಾರ ಸಮನ್ಸ್ ನೀಡಿತ್ತು. ಸೋಮವಾರ ತಡರಾತ್ರಿವರೆಗೂ ಅಶ್ವಿನಿ ಉಪಾಧ್ಯಾಯ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಪ್ರೀತ್ ಸಿಂಗ್ ಸೇರಿದಂತೆ ವಿನೋದ್ ಶರ್ಮಾ, ದೀಪಕ್, ವಿನೀತ್ ಕ್ರಾಂತಿ, ದೀಪಕ್ ಸಿಂಗ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಆರು ಮಂದಿಯನ್ನು ತಕ್ಷಣವೇ ಬಂಧಿಸುವ ಸಾಧ್ಯತೆ ಇರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಕಮೀಷನರ್ ರಾಕೇಶ್ ಅಸ್ತಾನಾ, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೆಲ್ಲಾ ಬಂಧನಕ್ಕೊಳಗಾಗಲಿದ್ದರೆಯೋ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
ಜಂತರ್ ಮಂತರ್ ಬಳಿ ನಡೆದಿದ್ದ ಪ್ರತಿಭಟನೆಯ ಸಂದರ್ಭ ಕೋಮು ಪ್ರಚೋದಕ ಘೋಷಣೆ ಕೂಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ಪ್ರಚೋದನಕಾರಿ ಭಾಷಣ ಮಾಡಿರುವುದು ದಾಖಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಕಮೀಷನರ್ಗೆ ಪತ್ರ ಬರೆದಿರುವ ಅಶ್ವಿನಿ ಉಪಾಧ್ಯಾಯ, "ನನ್ನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ನಾನು ಯಾವತ್ತೂ ಭೇಟಿ ಮಾಡಿಲ್ಲ. ಅಲ್ಲದೇ ನನಗೆ ಅವರ ಪರಿಚಯವೂ ಇಲ್ಲ. ಆ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ" ಎಂದು ಉಲ್ಲೇಖಿಸಿದ್ದಾರೆ.