ಮೈಸೂರು, ಆ 10 (DaijiworldNews/MS): ಸಂಭವನೀಯ ಕೊರೋನಾ 3ನೇ ಅಲೆ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಪ್ರಾಥಮಿಕ ಕೇಂದ್ರ ವ್ಯಾಪ್ತಿಯಲ್ಲಿರುವ ಶಾಲಾ ಹಂತದಲ್ಲಿಯೇ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆಯ ಸ್ಥಿತಿಗತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆಯಾಗಿದೆ. 3ನೇ ಅಲೆ ಬರಬಾರದು ಎಂಬುವುದು ನಮ್ಮ ಪ್ರಾರ್ಥನೆಯಾಗಿದೆ. ತಜ್ಞರು ಕೂಡ ಮಕ್ಕಳ ಆರೋಗ್ಯದತ್ತ ಗಮನ ಹರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಲೆಯಲ್ಲಿ ಈ ಶಿಬಿರ ಆಯೋಜಿಸಲಾಗುತ್ತಿದೆ. 6-14 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಗಡಿ ಭಾಗದಲ್ಲಿ ಬಿಗಿ ತಪಾಸಣೆ ಆರಂಭಿಸಲಾಗಿದೆ. ಕಟ್ಟೆಚ್ಚರವಹಿಸಲು ಸೂಚಿಸಲಾಗಿದೆ. ಈಗಾಗಲೇ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಗಡಿ ಪ್ರವೇಶಿಸುವವರಿಗೆ ಆರ್'ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.