ನವದೆಹಲಿ, ಆ 10 (DaijiworldNews/MS): ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿಈ ವರ್ಷದ ಜೂನ್ ವರೆಗೆ ಪಾಕಿಸ್ತಾನ ಒಟ್ಟು 33 ಒಳನುಸುಳುವಿಕೆ ಪ್ರಯತ್ನಗಳನ್ನು ಮಾಡಲಾಗಿದೆ ಆದರೆ ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸೋಮವಾರ ತಿಳಿಸಿದೆ.
ಮೇಲ್ಮನೆಯಲ್ಲಿ ಗಡಿ ಕುರಿತ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್, ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ 11 ಭಯೋತ್ಪಾದಕರನ್ನು ನಿಯಂತ್ರಣ ರೇಖೆಯಲ್ಲಿ ಹತ್ಯೆ ಮಾಡಲಾಗಿದ್ದು 20 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇಂಡೋ-ಬಾಂಗ್ಲಾದೇಶದ ಬಗ್ಗೆ ಮಾತನಾಡುತ್ತಾಈ ವರ್ಷ ಜೂನ್ ವರೆಗೆ ಬಾಂಗ್ಲಾದೇಶದಿಂದ ಒಟ್ಟು 441 ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ. ನೇಪಾಳ ಗಡಿಯಲ್ಲಿ 11 ಒಳನುಸುಳುಕೋರರನ್ನು ಬಂಧಿಸಲಾಗಿದೆ ಎಂದರು.
ಭಾರತ-ಮಾಯನ್ಮಾರ್ ಗಡಿಯಲ್ಲಿ, ಮಾಯನ್ಮಾರ್ನ 8,486 ನಾಗರಿಕರು ಮತ್ತು ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. ಈ ಪೈತಿ 5,796 ಮಂದಿಯನ್ನು ಗಡಿಯಿಂದ ವಾಪಸ್ ಕಳುಹಿಸಲಾಗಿದೆ. 2,690 ಮಂದಿ ಭಾರತದಲ್ಲೇ ಉಳಿದುಕೊಂಡಿದ್ದಾರೆ ಎಂದು ಅಜಯ್ ಭಟ್ ಮಾಹಿತಿ ನೀಡಿದರು.
ಗಡಿಗಳಲ್ಲಿ ಪಡೆಗಳಿಂದ ಬಂಧಿಸಲ್ಪಟ್ಟ ನುಸುಳುಕೋರರನ್ನು ಸಂಬಂಧಪಟ್ಟ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ. ಭಾರತ-ಚೀನಾ ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳ ಕುರಿತು, ಈ ವರ್ಷ ಯಾವುದೇ ಒಳನುಸುಳುವಿಕೆ ಪ್ರಕರಣ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು.