ಬೆಂಗಳೂರು, ಆ. 09 (DaijiworldNews/SM): ಕಿಸಾನ್ ಸಮ್ಮಾನ್ ಯೋಜನೆಯಡಿ ಈ ಸಾಲಿನ ಎರಡನೇ ಕಂತು ಬಿಡುಗಡೆಗೊಂಡಿದೆ. ಎರಡನೇ ಕಂತಿನಲ್ಲಿ ರಾಜ್ಯದ 51. 19 ಲಕ್ಷ ರೈತರಿಗೆ 1,023 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ನೇರವಾಗಿ ರೈತರ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈಗಾಗಲೇ ರೈತರ ಖಾತೆಗಳಿಗೆ ವಾರ್ಷಿಕ ಆರು ಸಾವಿರ ರೂಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. 2019ರಿಂದ ಯೋಜನೆ ಜಾರಿಯಾಗಿದ್ದು, ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತ ಕುಟುಂಬಕ್ಕೆ ಹಣ ಬಿಡುಗಡೆ ಮಾಡಲಾಗಿದೆ.
ಈ ಅನುದಾನವನ್ನು 2 ಸಾವಿರ ರೂ. ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಇಲ್ಲಿಯವರಿಗೆ 55.06 ಲಕ್ಷ ರೈತ ಕುಟುಂಬಗಳು 1ನೇ ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದಾರೆ. 2019ರ ಮಾರ್ಚ್ ನಿಂದ ಜುಲೈ 2021ರವರೆಗೆ ಕೇಂದ್ರ ಸರ್ಕಾರದಿಂದ ಒಟ್ಟು 6940.07 ಕೋಟಿ ರೂ. ಗಳ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.