ಗೋಕಾಕ, ಆ.09 (DaijiworldNews/HR): ಕರ್ನಾಟಕದಲ್ಲಿ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಲು ಪ್ರಯತ್ನಿಸಿದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬಡವರ ಪರವಾಗಿ ಕೆಲಸ ಮಾಡಿದವರಾಗಿದ್ದು, ಆ ಉದ್ದೇಶದಿಂದಲೇ ಇಂದಿರಾ ಕ್ಯಾಂಟಿನ್ ಎಂದು ಹೆಸರಿಡಲಾಗಿದೆ. ಬಿಜೆಪಿ ನಾಯಕರ ಈ ನಿರ್ಧಾರ ಸರಿಯಲ್ಲ. ತಪ್ಪು ತೀರ್ಮಾನದಿಂದ ಹಿಂದೆ ಸರಿಯಬೇಕು" ಎಂದಿದ್ದಾರೆ.
ಇನ್ನು "ಈ ಬಗ್ಗೆ ಈಗಾಗಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ನಾಯಕರು ಎಲ್ಲರೂ ಮಾತನಾಡಿದ್ದೇವೆ. ವಿರೋಧದ ನಡುವೆಯೂ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆಗೆ ಮುಂದಾದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಪ್ರತಿಭಟನೆ ಮಾಡಲಿದ್ದೇವೆ" ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
"ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಅನುದಾನವನ್ನು ಪ್ರತಿ ವರ್ಷ ಹೆಚ್ಚಿಸಬೇಕು. ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ಸರ್ಕಾರ ಕಡಿತಗೊಳಿಸುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಕ್ರೀಡೆಯ ಬಗ್ಗೆ ನಿರ್ಲಕ್ಷ ತೋರಿದಂತಾಗುತ್ತದೆ" ಎಂದು ಹೇಳಿದ್ದಾರೆ.