ಪಂಜಾಬ್, ಆ 09 (DaijiworldNews/PY): "ಅಮೃತಸರದ ಧಾಲಿಕೆ ಎಂಬ ಗ್ರಾಮದಲ್ಲಿ ಟಿಫಿನ್ ಬಾಕ್ಸ್ನಲ್ಲಿ ಐಇಡಿ ಪತ್ತೆಯಾಗಿದ್ದು, ತೀವ್ರ ಆತಂಕ ಸೃಷ್ಟಿಯಾಗಿದೆ. ಟಿಫಿನ್ ಬಾಕ್ಸ್ ಇದ್ದ ಚೀಲದಲ್ಲಿ ಇತರ ಕೆಲವು ಸ್ಪೋಟಕಗಳೂ ಪತ್ತೆಯಾಗಿವೆ" ಎಂದು ಅಮೃತಸರ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ ತಿಳಿಸಿದ್ದಾರೆ.
ಪಾಕಿಸ್ತಾನ ಕಡೆಯಿಂದ ಇದನ್ನು ಡ್ರೋನ್ನಿಂದ ತಂದು ಹಾಕಲಾಗಿದೆ. ಮಗುವೊಂದರ ಬ್ಯಾಗ್ನಲ್ಲಿ ಟಿಫಿನ್ ಬಾಕ್ಸ್ನಲ್ಲಿ ಐಇಡಿ ಪತ್ತೆಯಾಗಿದೆ. ಅದೇ ಬ್ಯಾಗ್ನಲ್ಲಿ ಐದು ಹ್ಯಾಂಡ್ ಗ್ರೆನೇಡ್ಗಳಿದ್ದವು ಎನ್ನಲಾಗಿದೆ. ಅದನ್ನು ನಿಷ್ಕ್ರಿಯಗೊಳಿಸಲಾಗಿದೆ.
"ಪಾಕ್ನಿಂದ ಡ್ರೋನ್ ಮುಖೆನ ಗಡಿಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್ ನಡೆಯುತ್ತಿದೆ. ಭಾನುವಾರ ಸಂಜೆ ವೇಳೆ ಡ್ರೋನ್ ಸದ್ದು ಕೇಳಿದ್ದಾಗಿ ಇಲ್ಲಿನ ಜನ ತಿಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಲಿದ್ದು, ಈ ರೀತಿಯಾದ ಬೆದರಿಕೆ ಕರೆಗಳು ಬರುತ್ತಲೇ ಇವೆ. ಈ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿದೆ.