ಬೆಂಗಳೂರು, ಆ 09 (DaijiworldNews/PY): "ಪರಿಶಿಷ್ಟ ಜಾತಿಯ ಬಡ ಕುಟುಂಬಗಳ ಮನೆ ನಿರ್ಮಾಣದ ಅನುದಾನವನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ" ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದ್ಯ ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ 1.70 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಈ ಮೊತ್ತದಿಂದ ಒಳ್ಳೆಯ ಮನೆ ನಿರ್ಮಾಣ ಮಾಡಲಾಗದು. ಹಾಗಾಗಿ ಫಲಾನುಭವಿಗಳಿಗೆ 5 ಲಕ್ಷ ರೂ. ಅನುದಾನ ನೀಡಲು ಅನುಮತಿ ಕೋರಿ ಸಿಎಂ ಅವರಿಗೆ ಕೂಡಲೇ ಪ್ರಸ್ತಾವ ಸಲ್ಲಿಸಲಾಗುವುದು" ಎಂದಿದ್ದಾರೆ.
"ಇಲಾಖೆಯಲ್ಲಿ ಒಂದು ವರ್ಷ ಕಾಲ ಅನಗತ್ಯ ಖರ್ಚಿಗೆ ಕಡಿವಾಣ ಹಾಕಲಾಗುವುದು. ಅಲ್ಲದೇ, ಅನಿವಾರ್ಯವಲ್ಲದ ಯೋಜನೆಗಳನ್ನು ತಡೆ ಹಿಡಿಯಲಾಗುವುದು. ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಒಳ್ಳೆಯ ಮನೆ ಸೇರಿದಂತೆ ಶೌಚಾಲಯ, ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗಯ ಸೌಲಭ್ಯ, ವಿದ್ಯುತ್ ಸಂಪರ್ಕ ಒದಗಿಸಲು ಆದ್ಯತೆ ನೀಡಲಾಗುವುದು" ಎಂದು ತಿಳಿಸಿದ್ದಾರೆ.
"ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಪೂರ್ಣ ಪಾರದರ್ಶಕ ತರಲಾಗುವುದು. ಪಾರದರ್ಶಕತೆ ಇಲ್ಲದಿದ್ದಲ್ಲಿ ಯಾವುದೇ ರೀತಿಯಾದ ಅನುದಾನ ಬಳಕೆಗೆ ಅವಕಾಶವಿಲ್ಲ" ಎಂದು ಹೇಳಿದ್ದಾರೆ.