ನವದೆಹಲಿ, ಆ.09 (DaijiworldNews/HR): ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಬಿಡುಗಡೆ ಬಳಿಕ ಹಲವು ರೈತರ ಜತೆ ಸಂವಾದ ನಡೆಸಿದ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ , "ಕಿಸಾನ್ ಸಮ್ಮಾನ್ ಯೋಜನೆ 9ನೇ ಕಂತಿನಲ್ಲಿ 10 ಕೋಟಿ ರೈತರ ಖಾತೆಗಳಿಗೆ ಸುಮಾರು 19,500 ಕೋಟಿ ವರ್ಗಾವಣೆಯಾಗಿದ್ದು, ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವಾಗಲಿದೆ" ಎಂದಿದ್ದಾರೆ.
ಇನ್ನು ಈ ವರ್ಷ ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದು, ಇದು ಮಹತ್ವದ ಮೈಲಿಗಲ್ಲಾಗಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಮಾತ್ರವಲ್ಲದೆ ಹೊಸ ನಿರ್ಣಯಗಳು ಮತ್ತು ಗುರಿಗಳಿಗೆ ತೆರೆದುಕೊಳ್ಳುವ ಸಂದರ್ಭವಾಗಿದ್ದು, ಮುಂದಿನ 25 ವರ್ಷಗಳಲ್ಲಿ ಭಾರತ ಯಾವ ಸ್ಥಾನದಲ್ಲಿರಬೇಕು ಎಂಬ ಬಗ್ಗೆ ಈ ಸಂದರ್ಭದಲ್ಲಿ ನಾವು ನಿರ್ಧಾರ ಕೈಗೊಳ್ಳಬೇಕು" ಎಂದರು.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ನಮ್ಮ ರೈತರು ಒಗ್ಗಟ್ಟು ಪ್ರದರ್ಶಿಸಿರುವುದನ್ನು ನಾವು ನೋಡಿದ್ದೇವೆ. ರೈತರು ಕೃಷಿ ಉತ್ಪನ್ನಗಳನ್ನು ದಾಖಲೆಯ ಪ್ರಮಾಣದಲ್ಲಿ ಬೆಳೆದಿದ್ದಾರೆ. ಸರ್ಕಾರವೂ ರೈತರ ಕಷ್ಟಗಳನ್ನು ಆದಷ್ಟು ಕಡಿಮೆ ಮಾಡಲು ಯತ್ನಿಸಿದ್ದು, ಬಿತ್ತನೆ ಬೀಜಗಳು, ರಸಗೊಬ್ಬರ ಒದಗಿಸುವ ಮೂಲಕ ಹಾಗೂ ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ಮೂಲಕ ಅವರಿಗೆ ನೆರವಾಗಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ" ಎಂದು ಹೇಳಿದ್ದಾರೆ.