ಬೆಂಗಳೂರು, ಆ 09 (DaijiworldNews/MS): ಪ್ರಧಾನಮಂತ್ರಿ ಮೋದಿಗಿಂತ ನಾನೇ ಸೀನಿಯರ್. ನಾನು ಹುಟ್ಟಿರೋದು ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ. ಆದರೆ ನರೇಂದ್ರ ಮೋದಿ ಹುಟ್ಟಿದ್ದು ಸ್ವಾತಂತ್ರ್ಯ ಬಂದ ಬಳಿಕ . ಆದರೆ ಈಗ ನಮಗೇ ಪಾಠ ಹೇಳೋಕೆ ಬರುತ್ತಾರೆ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಹಿನ್ನೆಲೆಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲೇ ನಾನು ಹುಟ್ಟಿದ್ದೇನೆ. ನರೇಂದ್ರ ಮೋದಿ ಆಮೇಲೆ ಹುಟ್ಟಿರೋದು. ಹೀಗಾಗಿ ನಾನು ಪ್ರಧಾನಮಂತ್ರಿ ಮೋದಿಗಿಂತ ಹಿರಿಯವ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏನಾದರೂ ಬದಲಾವಣೆ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ 60 ವರ್ಷ ಅಧಿಕಾರ ಕೊಟ್ಟಿದ್ದೀರಾ. ನಮಗೆ 60 ತಿಂಗಳು ಕೊಡಿ ಎಂದು ಮೋದಿ ಹೇಳಿದ್ದರು. 7 ವರ್ಷದಲ್ಲಿ ಏನಾಯಿತು? ಬಿಜೆಪಿ ನೇತೃತ್ವದ ಸರ್ಕಾರ ಆಸ್ತಿತ್ವಕ್ಕೆ ಬಂದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಜಿಡಿಪಿ ಕುಸಿದಿದೆ. ಜನರ ಜೀವನ ಮಟ್ಟ ಕೆಳಮಟ್ಟಗೆ ಹೋಗಿದೆ, ನಿರುದ್ಯೋಗ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಸಿಎಂ ಬೊಮ್ಮಾಯಿ ಅವರು , ಬಿ.ಎಸ್.ಯಡಿಯೂರಪ್ಪ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ. ಈಗಿನ ಮುಖ್ಯಮಂತ್ರಿಗಳಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.