ಕೋಲ್ಕತ್ತಾ, ಆ 09 (DaijiworldNews/PY): "ತ್ರಿಪುರಾದಲ್ಲಿ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹಾಗೂ ಇತರ ಪಕ್ಷದ ಮೇಲೆ ನಡೆದ ದಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೂರಿದ್ದಾರೆ.
ಗಾಯಗೊಂಡ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಇಂತಹ ವ್ಯಕ್ತಿಗಳಿಂದ ಧೈರ್ಯ ಕಳೆದುಕೊಳ್ಳುವುದಿಲ್ಲ" ಎಂದಿದ್ದಾರೆ.
"ಉತ್ತರ ಪ್ರದೇಶ ಸೇರಿದಂತೆ, ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಅರಾಜಕ ಸರ್ಕಾರ ನಡೆಸುತ್ತಿದೆ. ತ್ರಿಪುರಾದಲ್ಲಿ ಅಭಿಷೇಕ್ ಸೇರಿದಂತೆ ಟಿಎಂಸಿಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಇದನ್ನು ನಾವು ಖಂಡಿಸುತ್ತೇವೆ" ಎಂದು ಆರೋಪಿಸಿದ್ದಾರೆ.
"ಈ ರೀತಿಯಾದ ದಾಳಿಗಳು ಕೇಂದ್ರ ಗೃಹ ಸಚಿವರ ಬೆಂಬಲವಿಲ್ಲದೇ ನಡೆಯದು" ಎಂದಿದ್ದಾರೆ.
ತ್ರಿಪುರಾದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಅಭಿಷೇಕ್ ಬ್ಯಾನರ್ಜಿ ಹಾಗೂ ಟಿಎಂಸಿ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಕೆಲ ದಿನಗಳ ಬಳಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.