ಬೆಂಗಳೂರು, ಆ 09 (DaijiworldNews/PY): "ನನ್ನ ಬೆಳವಣಿಗೆ ಸಹಿಸದವರು ನನ್ನ ಮೇಲೆ ಇಡಿ ದಾಳಿ ನಡೆಸಲು ದೂರು ನೀಡಿದ್ದಾರೆ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪರೋಕ್ಷವಾಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಅವರು ಭಾವಿಸಿಯೇ ಇರಲಿಲ್ಲ. ನನ್ನ ಏಳಿಗೆ ಕಂಡು ನಾನು ಹಿಂದೆ ಇದ್ದ ಪಕ್ಷದವರೇ ಇಡಿಗೆ ದೂರು ನೀಡಿದ್ದಾರೆ. ಆ ವ್ಯಕ್ತಿಯ ಹೆಸರನ್ನು ನಾನು ತಿಳಿಸುವುದಿಲ್ಲ" ಎಂದಿದ್ದಾರೆ.
"ನಮ್ಮ ಮನೆ ಮೇಲೆ ಇಡಿ ದಾಳಿಯಾಗಿಲ್ಲ. ದೂರು ಆಧರಿಸಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಡಿ ದಾಳಿಯಿಂದ ನನಗೂ ಆಶ್ಚರ್ಯವಾಗಿದೆ. ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮನೆ ನಿರ್ಮಾಣದ ಲೆಕ್ಕಾಚಾರ ಸೇರಿದಂತೆ ಒಳಾಂಗಣ ವಿನ್ಯಾಸದ ಬಗ್ಗೆ ದಾಖಲೆ ಕೇಳಿದ್ದರು. ಅದಕ್ಕೆ ದಾಖಲೆಗಳನ್ನು ನೀಡಿದ್ದೇನೆ. ಇಡಿ ದಾಳಿಗೂ ಹಾಗೂ ಐಎಂಎ ವಂಚನೆ ಪ್ರಕರಣಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.
"ನಾನು ರಾಜಕೀಯವಾಗಿ ಬೆಳೆಯಬಾರದು ಎನ್ನುವ ಉದ್ದೇಶದಿಂದ ದಾಳಿ ಮಾಡಿದ್ದಾರೆ. ಈ ದಾಳಿಯಿಂದ ನಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ. ನನಗೆ ಇಡಿ ದಾಳಿ ಎದುರಿಸುವ ಶಕ್ತಿ ಇದೆ" ಎಂದಿದ್ದಾರೆ.