ಬೆಂಗಳೂರು, ಆ 09 (DaijiworldNews/MS): "ವರ ಕೊಟ್ಟವರ ತಲೆಯ ಮೇಲೆ ಉರಿ ಹಸ್ತ ಇಡಲು ಹೊರಟರೆ ಅವರು ಬಿಡುತ್ತಾರೆಯೇ ?" ಎಂದು ಪ್ರಶ್ನಿಸುವ ಮೂಲಕ ರಾಜ್ಯ ಬಿಜೆಪಿ ಘಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಕುಹಕವಾಡಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವೂ, " ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಕರ್ನಾಟಕದ ಟ್ವಿಟ್ಟರ್ ಪ್ರವಚನಕಾರ ಸಿದ್ದರಾಮಯ್ಯ ಅವರೇ, ನೀವು ಏನೂ ಕೆಲಸ ಮಾಡುವುದಿಲ್ಲ ಬರೇ ಬುರುಡೆ ಬಿಡುವುದು, ಸಂತೆ ಭಾಷಣ ಕೊಡುವುದು ಎಂದು ಆರೋಪಿಸಿ ನಿಮ್ಮವರೇ ಹೈಕಮಾಂಡ್ಗೆ ದೂರು ನೀಡಿದ್ದಾರೆ.
ಬಹುಶಃ, ಅವರೆಲ್ಲ ಮೂಲ ಕಾಂಗ್ರೆಸ್ಸಿಗರಾಗಿರಬಹುದಲ್ಲವೇ? ಎಂದು ವ್ಯಂಗ್ಯವಾಡಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಸೇರಿದಂತೆ ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್ಗೆ ದೂರು ನೀಡಿದ್ಧಾರೆ.ಮೂಲ ಕಾಂಗ್ರೆಸ್ಸಿಗರಿಗೆ ಈಗ ಅಸ್ಥಿತ್ವದ ಭಯ ಕಾಡುತ್ತಿದೆ. ಇದೊಂದು ರೀತಿ ಭಸ್ಮಾಸುರನ ಕತೆಯಂತೆ ಇದೆ. ವರ ಕೊಟ್ಟವರ ತಲೆಯ ಮೇಲೆ ಉರಿ ಹಸ್ತ ಇಡಲು ಹೊರಟರೆ ಅವರು ಬಿಡುತ್ತಾರೆಯೇ, ಸಿದ್ದರಾಮಯ್ಯ? ಎಂದು ಅಣಕಿಸಿದೆ.
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಸಿದ್ದರಾಮಯ್ಯ ಅವರಿಗೆ ತಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುವಷ್ಟರಲ್ಲೇ ವರಿಷ್ಠರಿಗೆ ದೂರು ಮುಟ್ಟಿದೆ.ಸದಾ ನೆರಮನೆಯ ದುಃಖಕ್ಕೆ ಅಳುವವರನ್ನು ಯಾರು ಮೆಚ್ಚುತ್ತಾರೆ ಸಿದ್ದರಾಮಯ್ಯ? ಬುಡ ಕುಸಿಯುವ ಮುನ್ನ ಎಚ್ಚರವಹಿಸಿ! ಎಂದು ಬಿಜೆಪಿ ಹೇಳಿದೆ.