ನವದೆಹಲಿ, ಆ.09 (DaijiworldNews/HR): ರಾಹುಲ್ ಗಾಂಧಿ ಅವರ ಅಧಿಕೃತ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದಕ್ಕಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಮತ್ತು ಎನ್ಎಸ್ಯುಐ (ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಇಂದು ದೇಶದಾದ್ಯಂತ ಪ್ರತಿಭಟನೆ ಮಾಡಲು ಮುಂದಾಗಿವೆ.
ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿಯು ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಿ ಅವರೊಂದಿಗೆ ಮಾತಾಡುತ್ತಿರುವಾಗ ತೆಗೆಸಿಕೊಂಡಿದ್ದ ಫೋಟೋವನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪೋಸ್ಟ್ ಮಾಡಿದ್ದರು. ಪೋಷಕರ ಗುರುತನ್ನು ಬಹಿರಂಗಪಡಿಸುವ ರಾಹುಲ್ ಗಾಂಧಿಯವರ ಟ್ವೀಟ್ ಅನ್ನು ಟ್ವಿಟರ್ ತೆಗೆದುಹಾಕಿದ್ದು, ಈ ಕ್ರಮವನ್ನು ಕೇಂದ್ರ ಸರ್ಕಾರದ ಒತ್ತಡದಿಂದ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎನ್ಎಸ್ಯುಐನ ಮುಖ್ಯಸ್ಥ ನೀರಜ್ ಕುಂದನ್, "ಬಿಜೆಪಿ ಸರ್ಕಾರದ ಬೆದರಿಕೆ ರಾಜಕಾರಣ ಮಿತಿ ಮೀರುತ್ತಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಅಮಾನತುಗೊಳಿಸಲು ಟ್ವಿಟರ್ ಮೇಲೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಇನ್ನು ಕಾಂಗ್ರೆಸ್ ನ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಮಾತನಾಡಿ, ಟ್ವೀಟರ್ ಇಂಡಿಯಾ ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ವೀಟರ್ ಇಂಡಿಯಾ ರಾಹುಲ್ ಗಾಂಧಿ ಅವರ ಖಾತೆಯನ್ನು ಬ್ಲಾಕ್ ಮಾಡಬಹುದು. ಆದರೇ ಅವರು ಜನ ಪರ ಧ್ವನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ನಿರಂತರವಾಗಿ ಬಡ ಜನರ ಧ್ವನಿಯಾಗಿ, ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಾರೆ" ಎಂದು ಹೇಳಿದ್ದಾರೆ.