ನವದೆಹಲಿ, ಆ 09 (DaijiworldNews/MS): ಗಣರಾಜ್ಯೋತ್ಸವದ ವೇಳೆ ರೈತರು ಟ್ರಾಕ್ಟರ್ ರಾರಯಲಿ ನಡೆಸಿ ಐತಿಹಾಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ಘಟನೆಯ ಬಳಿಕ ಮತ್ತೊಮ್ಮೆ ಅಹಿತಕರ ಘಟನೆ ನಡೆಯದಂತೆ ದೆಹಲಿ ಪೊಲೀಸರು ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ದೆಹಲಿ ಪೊಲೀಸರು ಕೆಂಪು ಕೋಟೆಯ ಮುಂಭಾಗದಲ್ಲಿ ಬೃಹತ್ ಕಂಟೇನರ್ಗಳನ್ನು ತಡೆಗೋಡೆಯಂತೆ ಅಳವಡಿಸಿದ್ದು,ಈ ಕಂಟೇನರ್ಗಳ ಗೋಡೆಯಿಂದಾಗಿ, ಯಾರಿಗೂ ಕೆಂಪು ಕೋಟೆಯ ಒಳಗೆ ಪ್ರವೇಶಿಸಲು ಅಥವಾ ರಹಸ್ಯವಾಗಿ ಇಣುಕಲು ಸಹ ಸಾಧ್ಯವಾಗುವುದಿಲ್ಲ. ಕೆಂಪುಕೋಟೆಯ ಸುತ್ತ ಇಂತಹ ವ್ಯವಸ್ಥೆ ಮಾಡಿದ್ದು ಇದೇ ಮೊದಲು.ಕೆಂಪುಕೋಟೆಯ ಸುತ್ತ ಅಳವಡಿಸಲಾಗಿರುವ ಕಂಟೇನರ್ ಗೋಡೆಗಳ ಮೇಲೆ ಸ್ವಾತಂತ್ರ್ಯ ದಿನದ ಥೀಮ್ ಪೇಂಟಿಂಗ್ಗಳನ್ನು ಚಿತ್ರಿಸಲಾಗುತ್ತದೆ.
ಜಮ್ಮು- ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯ ಕಾರಣದಿಂದಾಗಿಯೂ ರಾಷ್ಟ್ರ ರಾಜಧಾನಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೆ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ನೂರಾರು ಟ್ರಾಕ್ಟರ್ಗಳಲ್ಲಿ ಆಗಮಿಸಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ದೇಶಕ್ಕೆ ಮುಜುಗರ ಉಂಟಾಗಿತ್ತು. ಮಾತ್ರವಲ್ಲದೆ ಆನೇಕ ಸಾರ್ವಜನಿಕ ಆಸ್ತಿ- ಪಾಸ್ತಿಗೆ ಹಾನಿ ಸಂಭವಿಸಿತ್ತು.
ಇದಲ್ಲದೆ ವಿದೇಶದಲ್ಲಿರುವ ಕೆಲವು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ನಡೆಯುತ್ತಿರುವ ರೈತರ ಆಂದೋಲನದ ನೆಪದಲ್ಲಿ ಸಕ್ರಿಯರಾಗಿದ್ದಾರೆ. ಖಲಿಸ್ತಾನಿ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.