ನವದೆಹಲಿ, ಆ 09 (DaijiworldNews/PY): "ಕೊರೊನಾ ಲಸಿಕೆ ಪಡೆದ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ವಾಟ್ಸಾಪ್ಗೆ ಲಸಿಕೀಕರಣ ಪ್ರಮಾಣಪತ್ರ ರವಾನೆಯಾಗಲಿದೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.
"ಲಸಿಕೆ ದೃಢೀಕರಣ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಲು ಇಚ್ಛಿಸುವವರು, ವಾಟ್ಸಾಪ್ ಸಂಖ್ಯೆಯೊಂದಕ್ಕೆ ಸಂದೇಶ ಕಳುಹಿಸಬೇಕು. ಅವರಿಗೆ ಪ್ರಮಾಣಪತ್ರ ರವಾನೆಯಾಗಲಿದೆ" ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರ ಕಚೇರಿ ಮಾಹಿತಿ ನೀಡಿದೆ.
"ಕೊರೊನಾ ಲಸಿಕೆಯ ಪ್ರಮಾಣಪತ್ರವನ್ನು ಮೂರು ಹಂತಗಳಲ್ಲಿ ಮೈಗೋವ್ ಕೊರೊನಾ ಹೆಲ್ಪ್ಡೆಸ್ಕ್ನಿಂದ ಸುಲಭವಾಗಿ ಪಡೆದುಕೊಳ್ಳಬಹುದು. +91 9013151515 ಸಂಖ್ಯೆಯನ್ನು ಸೇವ್ ಮಾಡಿಟ್ಟುಕೊಳ್ಳಿ. ವಾಟ್ಸಾಪ್ನಲ್ಲಿ ಕೊರೊನಾ ಸರ್ಟಿಫಿಕೇಟ್ ಎಂದು ಟೈಪ್ ಮಾಡಿ ಕಳುಹಿಸಿ. ನಂತರ ಒಟಿಪಿಯನ್ನು ನಮೂದಿಸಿ. ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಕೊರೊನಾ ಲಸಿಕೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಿ" ಎಂದು ಆರೋಗ್ಯ ಸಚಿವರ ಕಚೇರಿ ಟ್ವೀಟ್ನಲ್ಲಿ ತಿಳಿಸಿದೆ.
ಭಾರತ ಸರಕಾರ ಮೈಗೋವ್ ಕೊರೊನಾ ಹೆಲ್ಪ್ಡೆಸ್ಕ್ ವಾಟ್ಸಾಪ್ ಚಾಟ್ಬಾಕ್ಸ್ ಅನ್ನು ಕೂಡಾ ಪ್ರಾರಂಭಿಸಲಿದ್ದು, ಇದರಲ್ಲಿ ಲಸಿಕೆ ಪ್ರಮಾಣಪತ್ರವನ್ನು ಸಹ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.