ಚಿತ್ರದುರ್ಗ, ಆ.09 (DaijiworldNews/HR): ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ಈಗ ಇಡೀ ದೇಶದಲ್ಲಿ ಬೆಳೆದಿದ್ದು, ನಾವಾಗಿ ನಾವು ಯಾರನ್ನೂ ಕೊಲೆ ಮಾಡಲು ಹೋಗಲ್ಲ, ನಮ್ಮ ಸುದ್ದಿಗೆ ಬ್ರಹ್ಮ ಬಂದ್ರೂ ಬಿಡಲ್ಲ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಂಡಾಗಿಂದ ದಿನವೂ ಒಂದೊಂದು ಕೆಟ್ಟ ಕನಸು ಬೀಳುತ್ತಿದ್ದು, ದೇಶ, ರಾಜ್ಯದಲ್ಲಿ ಕೆಟ್ಟ ಕನಸುಗಾರ ಯಾರಾದ್ರು ಇದ್ದರೆ ಅದು ಸಿದ್ದರಾಮಯ್ಯ. ನಮ್ಮ ಸರ್ಕಾರದಲ್ಲಿ ಅಸಮಧಾನ ಯಾಕೆ ಸ್ಪೋಟ ಆಗುತ್ತದೆ, ರಾಜ್ಯದಲ್ಲಿ ನಿಮ್ಮ ಸರ್ಕಾರ ಐದು ವರ್ಷ ಇತ್ತಲ್ಲ, ಯಾಕೆ ನೀವು ಸರ್ಕಾರ ಕಳೆದುಕೊಂಡಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಹೊರಗಡೆಯಿಂದ ಬಂದವರು ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಅದನ್ನ ಸಿದ್ದರಾಮಯ್ಯ ಒಪ್ಪಿಕೊಂಡು, ನಾನು ಹೊರಗಡೆಯಿಂದ ಬಂದದ್ದು ಹೌದು, ಕಾಂಗ್ರೆಸ್ ಪಕ್ಷದ ಸೊಸೆಯಾಗಿ ಬಂದಿದ್ದೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಬಾದಾಮಿಯಲ್ಲಿ ಮಗ ಎಂದು ಗೆದ್ದರು, ಚಾಮುಂಡೇಶ್ವರಿ ಯಲ್ಲಿ ಮಗ ಎಂದರು, ಇವರು ಯಾರಿಗೆ ಮಗ, ಯಾರಿಗೆ ಸೊಸೆ, ಯಾರಿಗೆ ಅಪ್ಪ, ಅಮ್ಮ" ಎಂದು ವ್ಯಂಗ್ಯ ಮಾಡಿದ್ದಾರೆ.
"ನಿಮ್ಮ ಸರ್ಕಾರ ಬಿದ್ದು ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ನಾನು ಸ್ಪಷ್ಟವಾಗಿ ಅವರಿಗೆ ಹೇಳುತ್ತೇನೆ. ನಿಮ್ಮ ಕೆಟ್ಟ ಕನಸಿಗೆ ಯಾವತ್ತೂ ಬೆಲೆ ಇಲ್ಲ, ಕರ್ನಾಟಕದಲ್ಲಿ ಇನ್ನೆಂದೆಂದೂ ಕಾಂಗ್ರೆಸ್ ಸರ್ಕಾರ ಬರಲ್ಲ. ನೀವಂತೂ ಮುಖ್ಯಮಂತ್ರಿ ಆಗೋ ಕನಸು ಬಿಟ್ಟುಬಿಡಿ" ಎಂದು ಹೇಳಿದ್ದಾರೆ.