ಜೈಪುರ, ಆ 09 (DaijiworldNews/MS): ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ಲಕುಟ್ಟಿ ಅವರು, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಉತ್ತಮ ನಾಯಕನಾಗಿದ್ದು, ಭವಿಷ್ಯದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಪೈಲಟ್ ನಿಷ್ಠಾವಂತ ಶಾಸಕರು ಬಂಡಾಯವೆದ್ದ ನಂತರ ಈ ಯುವ ಮುಖಂಡ ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಕೇಳಿಬಂದಿತ್ತು. ಆದಾಗ್ಯೂ ಸಚಿನ್ ಸ್ಪಷ್ಟನೆ ನೀಡಿ, ರಾಜಸ್ಥಾನದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ತಾವು ಕಠಿಣ ಪರಿಶ್ರಮ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ಬಿಜೆಪಿ ಮುಸ್ಲಿಮರ ವಿರುದ್ಧವಾಗಿದೆ ಎಂಬುದು ಸುಳ್ಳು. ಈ ಬಗ್ಗೆ ಕೆಲ ವ್ಯಕ್ತಿಗಳು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಗೌರವಾನ್ವಿತ ಆರ್ಎಸ್ಎಸ್ ಮುಖ್ಯಸ್ಥರು, ಮುಸ್ಲಿಮರು ಮತ್ತು ಹಿಂದೂಗಳು ಒಂದೇ ಮತ್ತು ಅವರ ಡಿಎನ್ಎ ಕೂಡ ಒಂದೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಎಲ್ಲರನ್ನೂ ಕರೆದೊಯ್ಯುವ ಪಕ್ಷವಾಗಿದೆ ಮತ್ತು ಇದು ಅದರ ತತ್ವವಾಗಿದೆ ಎಂದು ಎಂದೂ ಅಬ್ದುಲ್ಲಾಕುಟ್ಟಿ ಹೇಳಿದರು.