ಸೂರತ್, ಆ 09 (DaijiworldNews/PY): ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಒಂದು ರಸ್ತೆ ಬದಿಯ ಗುಡಿಸಲುಗಳ ಮೇಲೆ ಹರಿದ ಪರಿಣಾಮ ಗುಡಿಸಲುಗಳಲ್ಲಿ ಮಲಗಿದ್ದ ಎಂಟು ಮಂದಿ ಮೃತಪಟ್ಟ ಘಟನೆ ಗುಜರಾತ್ನ ಅಮ್ರೆಲಿ ಜಿಲ್ಲೆಯಲ್ಲಿ ನಡೆದಿದೆ.
ಅಮ್ರೆಲಿಯ ಸಾವರ್ಕುಂಡ್ಲದಲ್ಲಿ ಮುಂಜಾನೆ 3ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಕಾರಣವಾದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ಮಧ್ಯ ಸೇವಿಸಿ ಚಾಲನೆ ಮಾಡುತ್ತಿದ್ದನೇ ಎನ್ನುವ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಗುಜರಾತ್ ಸಿಎಂ ವಿಜಯ್ ರೂಪಾನಿ ಕಳವಳ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಮೃತಪಟ್ಟಿರುವ ಜನರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ, ಘಟನೆಯ ಬಗ್ಗೆ ಶೀಘ್ರವೇ ತನಿಖೆ ನಡೆಸುವಂತೆ ಅಮ್ರೆಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.