ಬೆಂಗಳೂರು, ಆ 09 (DaijiworldNews/PY): "ರಾಜ್ಯದ ಬಿಜೆಪಿ ಸಂಸದರೆಲ್ಲರೂ ಮೇಕೆದಾಟು ಯೋಜನೆ ವಿಚಾರದಲ್ಲಿ ಒಂದಾಗಿದ್ದೇವೆ" ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೇಕೆದಾಟು ಯೋಜನೆ ವಿಚಾರದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರ ಮನವೊಲಿಸಿದ್ದೇವೆ. ಕಾವೇರಿ ಕುಡಿಯುವ ನೀರಿನ ಹಕ್ಕ ನಮ್ಮದಾಗಿದ್ದು, ಅದನ್ನು ಪಡೆದೇ ಪಡೆಯುತ್ತೇವೆ. ತಮಿಳುನಾಡಿಗೆ ಈ ಯೋಜನೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೇ, ಅವರಿಗೆ ಹಂಚಿಕೆಯಾಗುವ ನೀರಿನಲ್ಲೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಸದ್ಯ ಇದಕ್ಕೆ ಸಂಬಂಧಿಸಿದ ಪ್ರಕರಣವು ಕಾವೇರಿ ನದಿನೀರು ನಿರ್ವಹಣ ಮಂಡಳಿ ಮುಂದಿರುವ ಕಾರಣ ನಾವು ಅಲ್ಲಿ ನಮ್ಮ ನಿಲುವು ಸ್ಪಷ್ಟಪಡಿಸಲಿದ್ದೇವೆ" ಎಂದು ತಿಳಿಸಿದ್ದಾರೆ.
"ವಿನಾಕಾರಣ ಸಂಸತ್ ಕಲಾಪಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿ ಮಾಡುತ್ತಿದ್ದಾರೆ. ದೇಶದ ಜನರಿಗೆ ಕಾಂಗ್ರೆಸಿಗರು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಪೆಗಾಸಸ್ ಕಾಂಗ್ರೆಸ್ನ ಟೂಲ್ ಕಿಟ್ ಪ್ರಕರಣದ ಮುಂದುವರಿದ ಭಾಗವಾಗಿದೆ. ಯಾವುದೇ ರೀತಿಯಾದ ಚರ್ಚೆಗೆ ಬಾರದ ಕಾಂಗ್ರೆಸ್ ಹಿಂಡ್ ಆಂಟ್ ರನ್ ನಿಯಮವನ್ನು ಪಾಲಿಸುತ್ತಿದೆ" ಎಂದು ದೂರಿದ್ದಾರೆ.