ಶಿವಮೊಗ್ಗ, ಆ.08 (DaijiworldNews/HR): ಬಿಜೆಪಿಯಲ್ಲಿ ಸಚಿವ ಸಂಪುಟ ಹಾಗೂ ಖಾತೆ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಗೆ ಬೇರೆ ಖಾತೆ ಬೇಕೆಂದು ಅವರ ಭಾವನೆಗಳನ್ನು ಹೇಳುತ್ತಿದ್ದಾರೆ ಅಷ್ಟೇ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಇಬ್ಬರು ಸಚಿವರಿಗೆ ಮುಖ್ಯಮಂತ್ರಿಗಳು ಸಮಾಧಾನ ಮಾಡುತ್ತಾರೆ. ಇದರಲ್ಲಿ ಬಹಳ ವಿಶೇಷವೇನಿಲ್ಲ, ಗೊಂದಲ ಸಹ ಇಲ್ಲ. ಸಿಎಂ ಚರ್ಚೆ ಮಾಡಿ ಬಗೆಹರಿಸುತ್ತಾರೆ" ಎಂದಿದ್ದಾರೆ.
ಮೇಕೆದಾಟು ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಅವರು ಮಾಡುತ್ತಿದ್ದಾರೆ. ಸುಪ್ರಿಂ ಕೋರ್ಟ್ ನಿರ್ಧಾರದ ಹಾಗೆ ನಾವು ಮೇಕೆದಾಟುವನ್ನು ಮಾಡಿಯೇ ಮಾಡುತ್ತೇವೆ. ಉಪವಾಸವಾದರೂ ಮಾಡಲಿ ಅದು ನಮಗೆ ಸಂಬಂಧವಿಲ್ಲ. ಅವರ ರಾಜ್ಯಕ್ಕೆ ಏನು ಬೇಕೋ ಹಾಗೇ ಪೊಲಿಟಿಕಲ್ ಆಗಿ ಯೋಚನೆ ಮಾಡುತ್ತಿರುವುದು ತಪ್ಪಲ್ಲ. ಅವರು ಅಲ್ಲಿ ಹೋರಾಟವನ್ನು ಮಾಡಿ ಪಾರ್ಟಿ ಕಟ್ಟಿಕೊಳ್ಳಲಿ. ಆದರೆ, ಸುಪ್ರಿಂ ಕೋರ್ಟ್ ತೀರ್ಪಿನ ಬಗ್ಗೆಯು ಸಹ ಅವರು ಗಮನ ಇಟ್ಟಿಕೊಳ್ಳಬೇಕು" ಎಂದು ಹೇಳಿದ್ದಾರೆ.