ಕೊಪ್ಪ, ಆ 08 (DaijiworldNews/PY): "ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಕಠಿಣವಾಗಿ ಜಾರಿಗೊಳಿಸಲಾಗುವುದು" ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಲೆನಾಡು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಅಕ್ರಮ ಗೋ ಸಾಗಾಟ ನಡೆಯುತ್ತಿರುವ ವಿಚಾರ ಗಮನದಲ್ಲಿದೆ. ಅಕ್ರಮ ಗೋ ಸಾಗಾಟವನ್ನು ನಿಷೇಧಿಸಲು ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಠಿಣವಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಪೊಲೀಸ್ ಇಲಾಖೆಯ ಔರಾದ್ಕರ್ ವರದಿಯ ವಿಚಾರವಾಗಿ ಪರಿಶೀಲನೆ ನಡೆಸಿ ಎಲ್ಲರಿಗೂ ಒಳ್ಳೆಯದಾಗುವ ರೀತಿಯಲ್ಲಿ ಕೆಲಸ ಮಾಡಲಾಗುವುದು" ಎಂದಿದ್ದಾರೆ.
"ಈ ಹಿಂದೆ ತೀರ್ಥಹಳ್ಳಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ನಂದಿತಾ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಈ ಬಗ್ಗೆ ಸಿಒಡಿ ತನಿಖೆ ನಡೆಸಿ ಬಿ ರಿಪೋರ್ಟ್ ಅನ್ನು ಸಲ್ಲಿಸಲಾಗಿದೆ. ಈ ಪ್ರಕರಣದ ತನಿಖೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈ ಹಿಂದೆ ಸಂಘ ಪರಿವಾರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ವಿಚಾರದ ಬಗ್ಗೆ ಗಮನಹರಿಸಲಾಗುವುದು" ಎಂದು ಹೇಳಿದ್ದಾರೆ.