ಚಿಕ್ಕಬಳ್ಳಾಪುರ, ಆ 08 (DaijiworldNews/PY): ಇಂದಿರಾ ಕ್ಯಾಂಟೀನ್ ಹೆಸರು ಮರುನಾಮಕರಣ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪರ ಬ್ಯಾಟ್ ಬೀಸಿರುವ ಸಚಿವ ಡಾ.ಕೆ.ಸುಧಾಕರ್, "ಇಂದಿರಾ ಕ್ಯಾಂಟೀನ್ಗೆ ಅನ್ನಪೂಣೇಶ್ವರಿ ಕ್ಯಾಂಟೀನ್ ಎಂದು ಹೆಸರಿಟ್ಟರೆ ತಪ್ಪೇನಿದೆ?" ಎಂದು ಕೇಳಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿ. ಟಿ ರವಿ ಅವರು ಇಂದಿರಾ ಕ್ಯಾಂಟೀನ್ ಹೆಸರನ್ನು ಮರುನಾಮಕರಣ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ, ಸರ್ಕಾರ ಈ ವಿಚಾರವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅನ್ನಪೂಣೇಶ್ವರಿ ನಮಗೆಲ್ಲರಿಗೂ, ಇಂದಿರಾ ಗಾಂಧಿಯವರಿಗೆ ತಾಯಿ ಇದ್ದಂತೆ. ಹಾಗಾಗಿ ಇಂದಿರಾ ಕ್ಯಾಂಟೀನ್ಗೆ ಅನ್ನಪೂಣೇಶ್ವರಿ ಎಂದು ಹೆಸರಿಟ್ಟರೆ ಏನು ತಪ್ಪು?" ಎಂದು ಪ್ರಶ್ನಿಸಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಬೊಮ್ಮಾಯಿ ಅವರು ಈಗಾಗಲೇ ಆನಂದ್ ಸಿಂಗ್ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಎಂಟಿಬಿ ನಾಗರಾಜ್ ಅವರು ಕೂಡಾ ಸಿಎಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಏನೇ ಅಸಮಾಧಾನವಿದ್ದರೂ ಸಿಎಂ ಬಗೆಹರಿಸಲಿದ್ದಾರೆ" ಎಂದು ತಿಳಿಸಿದ್ದಾರೆ.