ನವದೆಹಲಿ, ಆ.08 (DaijiworldNews/HR): ಪೆಗಾಸಸ್ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗೆ ಸರ್ಕಾರ ಅವಕಾಶ ನೀಡದಿರುವುದು ಸಂಸತ್ ಕಲಾಪಕ್ಕೆ ಅಡ್ಡಿಯುಂಟಾಗಲು ಕಾರಣವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಸುಗಮ ಕಲಾಪ ನಡೆಯುವಂತೆ ಮಾಡಬೇಕು ಎಂದು ಆರ್ಜೆಡಿ ಸಂಸದ ಮನೋಜ್ ಕುಮಾರ್ ಝಾ ಆಗ್ರಹಿಸಿದ್ದಾರೆ.
"ಪೆಗಾಸಸ್ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲಗಳು ಉಂಟಾಗಿ ಕಲಾಪದ ಸಮಯ ವ್ಯರ್ಥವಾಗಿರುವ ಕಾರಣ ಮುಂಗಾರು ಅಧಿವೇಶನ ಅವಧಿಯನ್ನು ವಿಸ್ತರಿಸುವಂತೆಯೂ ಒತ್ತಾಯಿಸಿರುವ ಝಾ, ಪ್ರತಿಪಕ್ಷಗಳ ಜತೆ ಮಾತುಕತೆಗೆ ಸಿದ್ಧ ಎಂದು ಸರ್ಕಾರ ಹೇಳುತ್ತದೆ. ಆದರೆ, ಮಾತುಕತೆಯ ಬಾಗಿಲನ್ನು ಮುಚ್ಚುತ್ತಿದೆ" ಎಂದಿದ್ದಾರೆ.
ಇನ್ನು ಜುಲೈ 19ರಂದು ಮುಂಗಾರು ಅಧಿವೇಶನ ಆರಂಭವಾದ ಬಳಿಕ ನಿರಂತರವಾಗಿ ಪ್ರತಿಪಕ್ಷಗಳ ಗದ್ದಲದಿಂದಾಗಿ ಸುಗಮ ಕಲಾಪ ನಡೆದಿಲ್ಲ. ಪೆಗಾಸಸ್ ಕುತಂತ್ರಾಂಶ ಕುರಿತ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟುಹಿಡಿದಿರುವ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಯುಂಟುಮಾಡುತ್ತಿವೆ.