ಬೆಂಗಳೂರು, ಆ 08 (DaijiworldNews/PY): "ಜವಾಹರ್ಲಾಲ್ ನೆಹರೂ ಅವರು ಸ್ವತಂತ್ರ ಭಾರತ ದೇಶದ ಪ್ರಥಮ ಪ್ರಧಾನಮಂತ್ರಿಯಾಗಿ ಭಾರತ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಲು ಮಹತ್ವದ ಪಾತ್ರ ವಹಿಸಿದ್ದಾರೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರ ವಿಧಾನಸೌಧದ ಮುಂಭಾಗದಲ್ಲಿ ಮರುಸ್ಥಾಪನೆಗೊಂಡ ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರೂ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜವಾಹರ್ಲಾಲ್ ನೆಹರೂ ಅವರು ರಾಷ್ಟ್ರದ ಆಡಳಿತ ಚುಕ್ಕಾಣಿಯನ್ನು ಬ್ರಿಟಿಷರಿಂದ ಭಾರತಕ್ಕೆ ತೆಗೆದುಕೊಂಡು ಮುಂದಿನ ಆಡಳಿತವನ್ನು ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನೆಹರು ಅವರು ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಅಭಿವೃದ್ದಿಗೊಳಿಸಿ ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು" ಎಂದಿದ್ದಾರೆ.
"ನೆಹರೂ ಅವರು ಮಹಾತ್ಮ ಗಾಂಧೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದು ಕಾರ್ಯನಿರ್ವಹಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲು ವಾಸ ಅನುಭವಿಸಿದ ನೆಹರೂ ಅವರ ಆದರ್ಶಗಳ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ" ಎಂದು ಹೇಳಿದ್ದಾರೆ.
"ಮೆಟ್ರೋ ಕಾಮಗಾರಿಯ ಕಾರಣದಿಂದ ಸ್ಥಳಾಂತರಗೊಂಡಿದ್ದ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರ ಪ್ರತಿಭೆಯನ್ನು ವಿಧಾನಸೌಧದ ಮುಂದೆ ಮರುಸ್ಥಾಪಿಸುವ ಮುಖೇನ ವಿಧಾನಸೌಧದ ಮೆರುಗು ಹೆಚ್ಚಿಸಿದಂತಾಗುತ್ತದೆ" ಎಂದು ತಿಳಿಸಿದ್ದಾರೆ.