ಲಕ್ನೋ, ಆ.08 (DaijiworldNews/HR): ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತರೂಢ ಪಕ್ಷ ಬಿಜೆಪಿಯು ಪ್ರಚಾರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಆಗಸ್ಟ್ 9ರಿಂದ ಚುನಾವಣಾ ಮತ ಪ್ರಚಾರ ಸೇರಿದಂತೆ 100 ಕ್ಕೂ ಅಧಿಕ ಪ್ರಚಾರ ಸಭಾ ಕಾರ್ಯಕ್ರಮಗಳ ರೂಪುರೇಷೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್, "ಆಗಸ್ಟ್ 9ರಿಂದ ಜಿಲ್ಲಾ ಪಂಚಾಯತ್ ಹಾಗೂ ಬ್ಲಾಕ್ ಮಟ್ಟದಲ್ಲಿ ಆರಂಭವಾಗುವ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಬರುವ ಜನವರಿ 26 ರ ತನಕ ನಡೆಯಲಿದೆ" ಎಂದಿದ್ದಾರೆ.
ಇನ್ನು ಈ ಬಾರಿಯೂ ಉತ್ತರ ಪ್ರದೇಶದ ಜನರು ಬಿಜೆಪಿಯನ್ನು ಬೆಂಬಲಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ ಎನ್ನುವ ವಿಶ್ವಾಸವಿದ್ದು, ಪಕ್ಷದ ಕಾರ್ಯಕರ್ತರೆಲ್ಲರೂ ಪಕ್ಷಕ್ಕಾಗಿ ಕಾರ್ಯ ನಿರತರಾಗಿದ್ದಾರೆ. ಜನಪರ ಹಾಗೂ ಅಭಿವೃದ್ಧಿ ಪರ ಸರ್ಕಾರಕ್ಕೆ ಎಂದಿಗೂ ಜನ ಬೆಂಬಲ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ದೇಶದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಉತ್ತರ ಪ್ರದೇಶದ ಅಭಿವೃದ್ಧಿ ಮಾಡುವಲ್ಲಿಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೆಲಸ ಮಾಡಿದೆ" ಎಂದರು.
ಆಗಸ್ಟ್ 10 ರಿಂದ ಆಗಸ್ಟ್ 20 ತನಕ ರಾಜ್ಯದ 403 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಕಾರ್ಯಕಾರಿ ಸಭೆಗಳು ನಡೆಯಲಿದ್ದು, ಬೂತ್ ವಿಜಯ್ ಅಭಿಯಾನ ಅಡಿಯಲ್ಲಿ ಬೂತ್ ಸಮಿತಿಗಳ ಸಭೆ ಅಗಸ್ಟ್ 23 ರಿಂದ ಸಪ್ಟೆಂಬರ್ 7 ರ ತನಕ ನಡೆಯಲಿದೆ ಎಂದು ಸುನಿಲ್ ಬನ್ಸಾಲ್ ತಿಳಿಸಿದ್ದಾರೆ.