ನವದೆಹಲಿ, ಆ 08 (DaijiworldNews/PY): "ಕಳೆದ ವರ್ಷ ಕೇರಳದ ಕೋಝಿಕ್ಕೋಡ್ನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಿಮಾನ ಅಪಘಾತಕ್ಕೀಡಾದ ಘಟನೆಯಲ್ಲಿ ಗಾಯಗೊಂಡವರು ಹಾಗೂ ಮೃತರ ಕುಟುಂಬಗಳಿಗೆ ಅಂತಿಮ ಪರಿಹಾರ ನೀಡಲಾಗಿದೆ" ಎಂದು ಸಂಸ್ಥೆ ಹೇಳಿದೆ.
"ಘಟನೆಯಲ್ಲಿ ಗಾಯಗೊಂಡಿದ್ದ 165 ಮಂದಿಯ ಪೈಕಿ 80 ಮಂದಿ ಪರಿಹಾರ ಸ್ವೀಕರಿಸಿದ್ದಾರೆ. ಮೃತಪಟ್ಟ 19 ಮಂದಿ ಪ್ರಯಾಣಿಕರ ಕುಟುಂಬಸ್ಥರು ಹಾಗೂ ಗಾಯಗೊಂಡವರ ಪೈಕಿ 85 ಮಂದಿಯ ಕುಟುಂಬಗಳ ಸದಸ್ಯರು ಪರಿಹಾರ ಮೊತ್ತ ಪಡೆಯಬೇಕಿದೆ" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಮಾಹಿತಿ ನೀಡಿದೆ.
"ಗಾಯಗೊಂಡವರ ಹಾಗೂ ಮೃತರ ಕುಟುಂಬದವರಲ್ಲಿ ಯಾರೂ ಕೂಡಾ ಪರಿಹಾರವನ್ನು ತಿರಸ್ಕರಿಸಿಲ್ಲ. ಪರಿಹಾರ ಬೇಕು ಎಂದು ಯಾರೂ ಕೂಡಾ ಕೋರ್ಟ್ ಮೊರೆ ಹೋಗಿಲ್ಲ" ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನ ವಕ್ತಾರ ಹೇಳಿದ್ದಾರೆ.
ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಕಳೆದ ವರ್ಷ ಆಗಸ್ಟ್ 7ರಂದು ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು, ಎರಡು ಭಾಗವಾಗಿತ್ತು.
ಅಪಘಾತದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮೃತಪಟ್ಟ ಪ್ರಯಾಣಿಕರ ಕುಟುಂಬದವರಿಗೆ 10 ಲಕ್ಷ ರೂ., 12 ವರ್ಷದ ಒಳಗಿನವರು ಮೃತಪಟ್ಟಿದ್ದರಿಗೆ ಅವರ ಕುಟುಂಬದವರಿಗೆ 5 ಲಕ್ಷ ರೂ., ಘಟನೆಯಲ್ಲಿ ಸಣ್ಣ-ಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ಹಾಗೂ ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮಧ್ಯಂತರ ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿತ್ತು.