ಮೈಸೂರು, ಆ.08 (DaijiworldNews/HR): ಶಾಸಕ ಎಸ್ ಎ ರಾಮದಾಸ್ಗೆ ಮಳಲವಾಡಿ ಭೂ ಹಗರಣ ಸಂಬಂಧ ಇದೀಗ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಮಳಲವಾಡಿ ಭೂ ಹಗರಣದಲ್ಲಿ ರಾಮದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
2008ರಲ್ಲಿ ಮಳಲವಾಡಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಎಸ್ ಎ ರಾಮದಾಸ್ ವಿರುದ್ಧ ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಪೊಲೀಸರು ಪ್ರಕರಣ ಸಂಬಂಧ ಬಿ-ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ವರದಿಯನ್ನು ಕೆಳ ನ್ಯಾಯಾಲಯವು ಅಂಗೀಕರಿಸಿದ್ದು, ಇದರಿಂದ ಸಮಾಧಾನವಾಗದಂತ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು, ಕೆಳ ಹಂತದ ನ್ಯಾಯಾಲಯದ ಕ್ರಮ ಪ್ರಶ್ನಿಸಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು 2019ರಲ್ಲೇ ರಾಮದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿತ್ತು. ಆದರೆ ಈ ಆದೇಶಕ್ಕೆ ಶಾಸಕ ರಾಮದಾಸ್ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಹೀಗೆ ತಂದಿದ್ದಂತ ತಡೆಯಾಜ್ಞೆಯನ್ನು ಹೈಕೋರ್ಟ್ ಇತ್ತೀಚೆಗೆ ತೆರವು ಮಾಡಿತ್ತು. ಮತ್ತೆ ವಿಚಾರಣೆ ಕೈಗೆತ್ತಿಕೊಂಡಂತ ಜನಪ್ರತಿನಿಧಿಗಳ ನ್ಯಾಯಾಲಯವು ಇದೀಗ ರಾಮದಾಸ್ ವಿರುದ್ಧ ಸೆಕ್ಷನ್ 420, 468 ಅಡಿಯಲ್ಲಿ ಕೇಸ್ ದಾಖಲಿಸುವಂತೆ ಸೂಚಿಸಿದೆ.