ನವದೆಹಲಿ, ಆ 08 (DaijiworldNews/PY): "ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಡೋಸ್ಗಳ ಮಿಶ್ರ ಪ್ರಯೋಗದಿಂದ ಉತ್ತಮ ಫಲಿತಾಂಶ ಸಿಕ್ಕಿದೆ" ಎಂದು ಐಸಿಎಂಆರ್ ತಿಳಿಸಿದೆ.
ಐಸಿಎಂಆರ್ ಹೇಳಿಕೆಯನ್ನು ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದ್ದು, "ಈ ಪ್ರಯೋಗದಿಂದ ಉತ್ತಮ ಫಲಿತಾಂಶ ದೊರೆತಿದೆ. ಈ ಅಧ್ಯಯನದಲ್ಲಿ ವೈರಸ್ ವಿರುದ್ದ ಉತ್ತಮ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರುವುದು ದೃಢಪಟ್ಟಿದೆ" ಎಂದು ತಿಳಿಸಿದೆ.
"ಓರ್ವ ವ್ಯಕ್ತಿಗೆ ಭಿನ್ನ ಲಸಿಕೆಗಳು ಅಂದರೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಡೋಸ್ ನೀಡುವ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸು ಮಾಡಿದೆ" ಎಂದು ಇತ್ತೀಚೆಗೆ ವರದಿಯಾಗಿತ್ತು.
"ಕಳೆದ ತಿಂಗಳುಮ ಭಾರತದ ಔಷಧ ನಿಯಂತ್ರಕ ಡಿಸಿಜಿಐಯ ತಜ್ಞರ ಸಮಿತಿಯು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಡೋಸ್ಗಳ ಬಗ್ಗೆ ಅಧ್ಯಯನ ನಡೆಸಲು ಶಿಫಾರಸು ನೀಡಿತು. ವ್ಯಾಕ್ಸಿನೇಷನ್ ಅನ್ನು ಪೂರ್ಣಗೊಳಿಸಲು ಓರ್ವ ವ್ಯಕ್ತಿಗೆ ಎರಡು ವಿಭಿನ್ನ ಲಸಿಕೆ ಶಾಟ್ಗಳನ್ನು ನೀಡಬಹುದೇ ಎನ್ನುವುದನ್ನು ತೀರ್ಮಾನಿಸುವುದು ಈ ಅಧ್ಯಯನದ ಉದ್ದೇಶವಾಗಿದೆ" ಎಂದು ಸಿಡಿಎಸ್ಸಿಒ ವಿಷಯ ತಜ್ಞರ ಸಮಿತಿ ತಿಳಿಸಿದೆ.