ನವದೆಹಲಿ, ಆ 08 (DaijiworldNews/PY): "ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾನೇನು ಕಿಂಗ್ ಮೇಕರ್ ಹಾಗೂ ಗೇಮ್ ಬ್ರೇಕರ್ ಅಲ್ಲ" ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಖಾಸಗಿ ವಾಹಿನಿಯ ಸಂವಾದದಲ್ಲಿ ಉತ್ತರ ಪ್ರದೇಶ ಚುನಾವಣೆ ಕುರಿತ ಮಾಹಿತಿ ಹಂಚಿಕೊಂಡ ಓವೈಸಿ, "ಉತ್ತರ ಪ್ರದೇಶದ ಚುನಾವಣೆಯಲ್ಲಿ ನಾನೇನು ಕಿಂಗ್ ಮೇಕರ್ ಹಾಗೂ ಗೇಮ್ ಬ್ರೇಕರ್ ಅಲ್ಲ. ಮುಸ್ಲಿಂ ನಾಯಕತ್ವದ ಸ್ಥಾಪನೆಗೆ ನಾನು ಇಲ್ಲಿಗೆ ಬಂದಿರೋದು" ಎಂದು ಹೇಳಿದ್ದಾರೆ.
ವಿಹಾರದ ಚುನಾವಣೆಯಲ್ಲಿ ನೀವು ಗೇಮ್ ಬ್ರೇಕರ್ ಅನ್ನುವುದನ್ನು ವಿಪಕ್ಷಗಳಿಗೆ ಸಾಬೀತು ಮಾಡಿದ್ದೀರಿ. ಹಾಗೆಯೇ ಆರ್ಜೆಡಿ ಆಟವನ್ನು ಬ್ರೇಕ್ ಮಾಡಿದ್ದು ನೀವೆ ಅಲ್ವಾ?. ಉತ್ತರ ಪ್ರದೇಶದಲ್ಲಿಯೂ ಅದೇ ರೀತಿಯಾದ ತಂತ್ರಗಳನ್ನು ಪ್ರಯೋಗಿಸಿ ಕಿಂಗ್ ಮೇಕರ್ ಅಥವಾ ಗೇಮ್ ಬ್ರೇಕರ್ ಆಗುತ್ತೀರಾ ಎಂದು ಸಂವಾದಲ್ಲಿ ಕೇಳಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರವನ್ನು ನೀವು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಬಹುದು. ನಮಗೆ ಅಲ್ಲಿ ಜನತೆಯ ಆಶೀರ್ವಾದ ದೊರೆತಿದೆ. ಆದರೆ, ಉತ್ತರಪ್ರದೇಶದಲ್ಲಿ ನನ್ನ ಗುರಿಯೇ ಬೇರೆಯಾಗಿದೆ. ಮುಸ್ಲಿಂ ನಾಯಕತ್ವದ ಸ್ಥಾಪನೆಗೆ ನಾನು ಇಲ್ಲಿಗೆ ಬಂದಿರೋದು" ಎಂದಿದ್ದಾರೆ.
"ಹಿಂದೂ ಸಹೋದರಿಯರಿಗೆ ಬಿಜೆಪಿಗರು ನಮ್ಮ ಭಯ ತೋರಿಸುತ್ತಾರೆ. ಇದೇ ರೀತಿಯಾಗಿ ಹಲವು ಮಂದಿ ತಮ್ಮ ಲಾಭಕ್ಕಾಗಿ ರಾಜಕೀಯವಾಗಿ ಆಡುತ್ತಿದ್ದಾರೆ. ಹಾಗಾಗಿ ನಮ್ಮ ಸಮುದಾಯಕ್ಕೆ ಇಲ್ಲಿ ನಾಯಕತ್ವದ ಅವಶ್ಯಕತೆ ಇದೆ. ಯಾರು ಏನು ಬೇಕಾದರೂ ರಾಜಕೀಯ ಮಾಡಲಿ, ಅದಕ್ಕೂ ನನಗೂ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.