ಬೆಂಗಳೂರು, ಆ.08 (DaijiworldNews/HR): ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ ಅವರನ್ನು ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಭೇಟಿಯಾದ ಆನಂದ್ ಸಿಂಗ್ ಖಾತೆ ಹಂಚಿಕೆ ವಿಚಾರದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು, ಪ್ರವಾಸೋದ್ಯಮದ ಬದಲಾಗಿ ತಾವು ಕೇಳಿದ ಖಾತೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತಿದ್ದಂತೆ ಆನಂದ್ ಸಿಂಗ್ ಬಹಿರಂಗವಾಗಿ ತಮಗೆ ದೊರೆತ ಖಾತೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದು, ಇದೀಗ ಇದರ ಬೆನ್ನಲ್ಲೇ ಸಾರಿಗೆ ಇಲಾಖೆ ದೊರೆತ ಬಗ್ಗೆ ಶ್ರೀರಾಮುಲು ಹಾಗೂ ಪೌರಾಡಳಿತ ಖಾತೆ ಬಗ್ಗೆ ಎಂಟಿಬಿ ನಾಗರಾಜ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
ಒಟ್ಟಾರೆ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಿತ ಸಚಿವರನ್ನು ಸಮಾಧಾನ ಪಡಿಸುವಲ್ಲಿ ಸಿಎಂ ಯಶಸ್ವಿಯಾಗಲಿದ್ದಾರಾ ಎನ್ನುವುದನ್ನು ಕಾದುನೋಡಬೇಕಾಗಿದೆ.