ಬೆಂಗಳೂರು, ಆ 08 (DaijiworldNews/PY): "ಎಲ್ಲರಿಗೂ ಅವರಿಗೆ ಬೇಕಾದ ಖಾತೆ ನೀಡಲು ಆಗುವುದಿಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಖಾತೆ ಬಗ್ಗೆ ಗೊಂದಲವಿದ್ದಲ್ಲಿ, ಈ ವಿಚಾರದ ಬಗ್ಗೆ ಸಚಿವರ ಜೊತೆ ಮಾತನಾಡುತ್ತೇನೆ. ಎಲ್ಲರಿಗೂ ಅವರಿಗೆ ಬೇಕಾದ ಖಾತೆಗಳನ್ನು ನೀಡಲು ಸಾಧ್ಯವಿಲ್ಲ" ಎಂದಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಆನಂದ್ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಚಿವ ಆನಂದ್ ಸಿಂಗ್ ನನಗೆ ಹತ್ತಿರವಾಗಿದ್ದು, ಅವರನ್ನು ಕರೆದು ನಾನು ಮಾತನಾಡುತ್ತೇನೆ. ಪ್ರತಿಯೋರ್ವರು ತಮಗೆ ಬೇಕಾದ ಖಾತೆಗಳನ್ನು ಪಡೆಯಲು ಆಗುವುದಿಲ್ಲ" ಎಂದು ತಿಳಿಸಿದ್ದಾರೆ.
ಆನಂದ್ ಸಿಂಗ್ ಅವರಿಗೆ ಅರಣ್ಯ, ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಆದರೆ, ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆನಂದ್ ಸಿಂಗ್, "ಯಾವ ಖಾತೆ ಬೇಕೆನ್ನುವುದನ್ನು ನಾನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೇಳಿದ್ದು, ನನ್ನ ಮನವಿಯನ್ನು ಪರಿಗಣಿಸುವುದಾಗಿ ತಿಳಿಸಿದ್ದರು. ಆದರೆ, ಇದೀಗ ಬೇರೆ ಖಾತೆ ನೀಡಲಾಗಿದೆ. ತಮ್ಮ ಖಾತೆ ಬದಲಿಸದಿದ್ದಲ್ಲಿ ರಾಜೀನಾಮೆ ನೀಡಿ, ಶಾಸಕನಾಗಿ ಉಳಿಯುವ ಕುರಿತು ಚಿಂತಿಸಲಾಗುವುದು" ಎಂದಿದ್ದರು.