ಬೆಂಗಳೂರು, ಆ.07 (DaijiworldNews/HR): ಕೊರೊನಾ ನಿಯಂತ್ರಣ ಮಾಡುವುದಕ್ಕಾಗಿ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ಡೌನ್ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ದರೆ, ನೀವು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೂಡಲೇ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಂದು ಒಂದು ಅಥವಾ ಎರಡು ತಿಂಗಳ ಕಾಲಮಿತಿಯಲ್ಲಿ ಎಲ್ಲರಿಗೂ ಲಸಿಕೆ ನೀಡಲಿ" ಎಂದರು.
ಇನ್ನು "ಕೇಂದ್ರದವರು ಲಸಿಕೆ ಪೂರೈಸುತ್ತಿಲ್ಲ, ನಿಮ್ಮ ಕೈಲಿ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಲಸಿಕೆಗಾಗಿ ಜನ ಇಂದಿಗೂ ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ. ಬಿಜೆಪಿಯವರಿಗೆ ಆಡಳಿತ ಮಾಡಲು ಗೊತ್ತಿಲ್ಲ. ಸಾಮಾನ್ಯ ಪ್ರಜ್ಞೆಯೂ ಇಲ್ಲ. ನಾವು ನೆರೆ ರಾಜ್ಯಗಳ ಜತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕೇ ಹೊರತು ಯಾರನ್ನೂ ಶತ್ರುಗಳಂತೆ ಕಾಣಬಾರದು" ಎಂದು ಹೇಳಿದ್ದಾರೆ.