ಬೆಂಗಳೂರು, (DaijiworldNews/PY): ಇಂದಿರಾ ಕ್ಯಾಂಟೀನ್ ಹೆಸರನ್ನು ಅನ್ನಪೂಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣಗೊಳಿಸುವಂತೆ ಒತ್ತಾಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಿರುದ್ದ ಕಾಂಗ್ರೆಸ್ ಕಿಡಿಕಾರಿದ್ದು, "ರಾಜ್ಯದ್ರೋಹಿ ಸಿ.ಟಿ ರವಿ, ಕಳೆದ 2 ವರ್ಷದಲ್ಲಿ ನಿಮ್ಮ ಸರ್ಕಾರದ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಿ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ರಾಜ್ಯದ್ರೋಹಿ ಸಿ.ಟಿ ರವಿ, ಕಳೆದ 2 ವರ್ಷದಲ್ಲಿ ನಿಮ್ಮ ಸರ್ಕಾರದ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಿ. ಇಂದಿರಾ ಕ್ಯಾಂಟೀನ್ಗೆ ಅನುದಾನ ಕೊಡಲಾಗದ, ಒಂದೂ ಜನಪರ ಯೋಜನೆ ಜಾರಿಗೊಳಿಸಲಾಗದ ಸಿಟಿ ರವಿಯ ಈ ಮಾತು ಕೈಲಾಗದವನು ಮೈ ಪರಚಿಕೊಂಡಂತೆ! ಅಂದಹಾಗೆ, ದೀನದಯಾಳ್ ಯಾವ ದೊಣ್ಣೆನಾಯಕನೆಂದು ಮೇಲ್ಸೇತುವೆಗೆ ಹೆಸರಿಟ್ಟಿದ್ದೀರಿ?" ಎಂದು ಪ್ರಶ್ನಿಸಿದೆ.
"ಇಂದಿರಾ ಗಾಂಧಿಯವರ ಮೇಲಿನ ದ್ವೇಷಕ್ಕೆ ಆಕ್ಸಿಡೆಂಟ್ ಮಾಡಿ ಇಬ್ಬರು ಅಮಾಯಕರನ್ನ ಕೊಂದ 'ಚೆಂಡು ಹೂ' ರವಿಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕಂತೆ! ಅದೇ ದ್ವೇಷದಲ್ಲಿ ಇಂದಿರಾ ಗಾಂಧಿಯವರ ಮಹತ್ತರವಾದ ಉಳುವವನೇ ಹೊಲದೊಡೆಯ ಕಾರ್ಯಕ್ರಮವನ್ನ ರದ್ದುಗೊಳಿಸುವಿರಾ ಸಿ.ಟಿ ರವಿ? ಬಾಂಗ್ಲಾದೇಶವನ್ನು ಪಾಕ್ನೊಂದಿಗೆ ಸೇರಿಸುವಿರಾ!?" ಎಂದು ಕೇಳಿದೆ.
"ಇಂದಿರಾ ಗಾಂಧಿ ಕರುಣಿಸಿದ ಅನ್ನ ತಿಂದು ಬೆಳೆದು ಅವರ ವಿರುದ್ಧವೇ ದ್ವೇಷ ಕಾರುತ್ತಿರುವ ಸಿ.ಟಿ ರವಿ ಮನೆಗೆ ಮಗನಲ್ಲ, ನಾಡಿಗೆ ಪ್ರಜೆಯಲ್ಲ! ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಫಲವಾಗಿ ಲಕ್ಷಾಂತರ ಕುಟುಂಬಗಳು ಬೆಳಕು ಕಂಡು ಹಸಿವು ನೀಗಿಸಿಕೊಂಡಿದ್ದನ್ನು ಮರೆತಿರುವ ಸಿಟಿ ರವಿ ತಾಯಿಗೂ, ತಾಯ್ನಾಡಿಗೂ ದ್ರೋಹ ಬಗೆಯುವ ಮನುಷ್ಯ" ಎಂದು ಆರೋಪಿಸಿದೆ.
"ಈಗಿನ ಹಲವು ಬಿಜೆಪಿ ನಾಯಕರು ಇಂದಿರಾ ಗಾಂಧಿಯವರ ಗರೀಬಿ ಹಠಾವೋ ಕಾರ್ಯಕ್ರಮದ ಫಲಾನುಭವಿಗಳೇ, ಸಿ.ಟಿ ರವಿ ಕೂಡ ಅದರಲ್ಲೊಬ್ಬರು. ಇಂದಿರಾ ಗಾಂಧಿಯವರ ಗರೀಭಿ ಹಠಾವೋ ಕಾರ್ಯಕ್ರಮ ಇಲ್ಲದೇ ಇದ್ದಿದ್ದರೆ ಸಿಟಿ ರವಿ ಇಂದು ಹರಿದ ಚಡ್ಡಿ ಹಾಕಿಕೊಂಡು ಯಾರದ್ದೋ ಮನೆಯ ಕೊಟ್ಟಿಗೆಯಲ್ಲಿ ಸೆಗಣಿ ಬಾಚುತ್ತಿದ್ದರು" ಎಂದು ಲೇವಡಿ ಮಾಡಿದೆ.
"ಕರ್ನಾಟಕದಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಕೂಡಲೇ ಅನ್ನಪೂಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡುತ್ತೇವೆ. ಕನ್ನಡಿಗರು ಆಹಾರ ಸೇವಿಸುವಾಗ ಇಂದಿರಾ ಗಾಂಧಿ ಅವರ ಹೆಸರಿನ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನುಏಕೆ ನೆನಪಿಸಿಕೊಳ್ಳಬೇಕು?" ಎಂದು ಸಿ.ಟಿ ರವಿ ಅವರು ಟ್ವೀಟ್ ಮಾಡಿದ್ದರು.