ಬೆಂಗಳೂರು, ಆ.07 (DaijiworldNews/HR): ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಈಗಾಗಲೇ ಸಚಿವ ಸಂಪುಟ ಕೂಡ ರಚನೆ ಮಾಡಲಾಗಿದ್ದು, ತಮ್ಮನ್ನು ಸಿಎಂ ಪಟ್ಟಕ್ಕೇರಿಸಿದಂತ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಿ ಸಿಎಂ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ ಶಂಕ್ರಪ್ಪ ಸೂಳಿಕೇರಿ ಅಧಿಸೂಚನೆ ಹೊರಡಿಸಿದ್ದು, "ಬಿಎಸ್ ಯಡಿಯೂರಪ್ಪನವರಿಗೆ ನೂತನವಾಗಿ ಪದಾರೋಹಣ ಮಾಡಿದ ಮುಖ್ಯಮಂತ್ರಿಗಳ ಪದವಿಯ ಅವಧಿ ಇರುವವರೆಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯವನ್ನು ನೀಡುವಂತೆ ಆದೇಶಿಸಿದ್ದಾರೆ".
ಇನ್ನು ನೂತನ ಸಚಿವರಾಗಿ ಪ್ರಮಾಣ ಸ್ವೀಕರಿಸಿದ 29 ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿತ್ತು. ಈ ಬಳಿಕ ಸಚಿವ ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ತಮಗೆ ಹಂಚಿಕೆ ಮಾಡಲಾಗಿರುವಂತ ಖಾತೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಖಾತೆ ಬದಲಿಸಿ ಕೊಡುವಂತೆಯೂ ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಡ ಹಾಕಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿದ್ದಾರೆ.