ಮೈಸೂರು, ಆ 07 (DaijiworldNews/MS): ಅಧಿಕಾರ ಸ್ವೀಕರಿಸುತ್ತಿದ್ದಂತೆ ದೇವೇಗೌಡರನ್ನು ಭೇಟಿಯಾಗುವ ಅವಶ್ಯಕತೆ ಏನಿತ್ತು, ಸಿಎಂ ಬೊಮ್ಮಾಯಿ ಅಡ್ಜಸ್ಟ್ ಮೆಂಟ್ ಸರ್ಕಾರ ನಡೆಸಿದರೆ ಹೇಗೆ ? ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಕಿಡಿಕಾರಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಹಾಗೂ ಹೆಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ನಿಂತಿದ್ದ ತಮಗೆ ಸಂಪುಟದಲ್ಲಿ ಸ್ಥಾನ ನೀಡದಿರುವುದು ಮತ್ತು ಸಿಎಂ ಪದವಿ ಸ್ವೀಕರಿಸಿದ ಬಳಿಕ ಬೊಮ್ಮಾಯಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದು ಪ್ರೀತಂ ಗೌಡ ಅಸಮಾಧಾನಕ್ಕೆ ಕಾರಣವಾಗಿದೆ.
ಹೊಂದಾಣಿಕೆ ರಾಜಕೀಯ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಆದರೂ ಹೊಂದಾಣಿಕೆ ರಾಜಕೀಯ ಮಾಡಿದರೆ ನಾನು ಮತದಾರನಾಗಿ ಮನೆಯಲ್ಲಿಯೇ ಇದ್ದುಬಿಡುತ್ತೇನೆ. ಇಲ್ಲವೇ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ. ಸಿಎಂ ನಡೆಯಿಂದ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ವಿರೋಧಿಯಾಗಿ ರಾಜಕಾರಣ ಮಾಡುತ್ತಿದ್ದೇವೆ. ಈ ಭಾಗಕ್ಕೆ ಸಚಿವ ಸ್ಥಾನ ನೀಡುವುದು ಹಾಗಿರಲಿ ಕೊನೆ ಪಕ್ಷ ಕಾರ್ಯಕರ್ತರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಬೇಡವೇ ? ಎಂದು ತಮ್ಮ ಆಕಕ್ರೋಶ ಹೊರಹಾಕಿದ್ದಾರೆ.
ಮುಂದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿವೆ. ಆ ಚುನಾವಣೆ ಕಾರ್ಯಕರ್ತರ ಚುನಾವಣೆ ಎಂಬುದು ಎಲ್ಲರಿಗೂ ಗೊತ್ತು. ಆಗ ನಾವು ಜೆಡಿಎಸ್ ವಿರುದ್ಧವೇ ಚುನಾವಣೆ ನಿಲ್ಲಬೇಕು. ಅವರ ವಿರುದ್ಧ ರಾಜಕೀಯ ಹೇಳಿಕೆಗಳನ್ನು ನೀಡಬೇಕು. ನಾವು ಇಲ್ಲಿ ಹೊಡೆದಾಡಿ ಪಕ್ಷವನ್ನು ಸಂಘಟಿಸುತ್ತೇವೆ. ಆದರೆ ನೀವು ಜೆಡಿಎಸ್ನೊಂದಿಗೆ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡುತ್ತೀರಿ. ಹೀಗಾದರೆ ನಾವು ಕೂಡ ರಾಜಿ ಮಾಡಿಕೊಂಡು ಹೋಗುತ್ತೇವೆ ಎಂದು ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನೇರಾನೇರ ಗುಡುಗಿದರು.