ಅಗರ್ತಲ, ಆ 07 (DaijiworldNews/PY): "ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ದೇವ್ ಅವರ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ" ಎಂದು ತ್ರಿಪುರಾ ಪೊಲೀಸರು ತಿಳಿಸಿದ್ದಾರೆ.
ಸಿಎಂ ಅವರು ತ್ರಿಪುರಾದ ಶ್ಯಾಮ್ಪ್ರಸಾದ್ ಮುಖರ್ಜಿ ಲೇನ್ನಲ್ಲಿರುವ ತಮ್ಮ ಅಧಿಕೃತ ನಿವಾಸದ ಸಮೀಪ ಗುರುವಾರ ಸಂಜಿ ವಾಯುವಿಹಾರ ಮಾಡುತ್ತಿದ್ದ ಸಂದರ್ಭ ಮೂವರು ವ್ಯಕ್ತಿಗಳು ಭದ್ರತೆಯನ್ನು ಬೇಧಿಸಿ, ಸಿಎಂ ಅವರ ಮೇಲೆ ಕಾರು ಹತ್ತಿಸಲು ಯತ್ನಿಸಿದರು. ಈ ವೇಳೆ ವಾಹನದಿಂದ ಪಕ್ಕಕ್ಕೆ ಸರಿದ ಬಿಪ್ಲವ್ ದೇವ್ ಅಪಾಯದಿಂದ ಪಾರಾಗಿದ್ದರು.
"ಭದ್ರತಾ ಸಿಬ್ಬಂದಿಗಳ ಪೈಕಿ ಓರ್ವ ವ್ಯಕ್ತಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸಿಎಂ ಅವರ ಭದ್ರತಾ ಸಿಬ್ಬಂದಿಗಳು ಕಾರನ್ನು ತಡೆಯಲು ಯತ್ನಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಲಿಲ್ಲ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಕೆರ್ಚೌಮುಹನಿಯಿಂದ ಮೂವರನ್ನು ಬಂಧಿಸಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಪಿಪಿ ಪೌಲ್ ಅವರ ಎದುರು ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ವಶಕ್ಕೆ ನೀಡಲಾಗಿದೆ.
"ಬಂಧಿತ ಆರೋಪಿಗಳು 20 ವರ್ಷ ವಯಸ್ಸಿನವರಾಗಿದ್ದು, ಹತ್ಯೆಗೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿದೆ. ತನಿಖೆ ಮುಂದುವರಿದಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.