ಬೆಂಗಳೂರು, ಆ 07 (DaijiworldNews/MS): ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ವಿರೋಧ ಪಕ್ಷಗಳಿಂದ ಜನತಾ ಪರಿವಾರ' ದಿಂದ ಬಂದವರಿಗೆ ಮಣೆ, ಪಕ್ಷ ನಿಷ್ಠರ ಕಡೆಗಣನೆ ಎಂಬ ಕೊಂಕು ಮಾತು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಸಿಎಂ ಇದಕ್ಕೆ ಖಡಕ್ ಆಗಿಯೇ ಉತ್ತರಿಸಿದ್ದು, ಮುಖ್ಯವಾಗಿ ಜೆಡಿಎಸ್ಗೆ ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಹೊರತುಪಡಿಸಿ, ಬೇರೆ ಪಕ್ಷಗಳಲ್ಲಿ ಕೇವಲ ಸ್ವಾರ್ಥದ ರಾಜಕಾರಣ ಇರುತ್ತದೆ. ಆದರೆ ಬಿಜೆಪಿಯಲ್ಲಿ ಜನರ ಸೇವೆ ಮುಖ್ಯವಾಗಿರುತ್ತದೆ. ನಾನು ಬಿಜೆಪಿಗೆ ಬರೋಕು ಮುನ್ನ ಬೇರೆ ಪಕ್ಷದಲ್ಲಿ ಇದ್ದು ಬಂದವನು. ಆದರೆ ಅಲ್ಲಿ ಇದ್ದಾಗ ನನಗೆ ಕಾಣಿಸಿದ್ದು ಬರೀ ಸ್ವಾರ್ಥ ರಾಜಕಾರಣ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ಗೆ ಸಿಎಂ ತಿರುಗೇಟು ನೀಡಿದರು.
ಇನ್ನು ಖಾತೆ ಹಾಗೂ ಸಚಿವಗಿರಿ ಸಿಗದ ಹಿನ್ನಲೆಯಲಿ ಬೇಸರ ಹೊರಹಾಕಿದ ಶಾಸಕ ಕುರಿತಾಗಿ ಮಾತನಾಡಿದ, " ಅವರೆಲ್ಲಾ ನನ್ನ ಆತ್ಮೀಯರು. ಹೀಗಾಗಿ ಅವರ ಬಳಿ ನಾನು ಮಾತನಾಡುತ್ತೇನೆ. ಎಲ್ಲ ಮಂತ್ರಿಗಳಿಗೂ ಖಾತೆ ಹಂಚಲಾಗಿದೆ, ಮುಂದೆ ಅವರವರ ಖಾತೆಗಳನ್ನು ಉತ್ತಮವಾಗಿ ನಿಭಾಯಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ ವಿಚಾರವಾಗಿ ಮಾತನಾಡಿದ ಸಿಎಂ , ಸಂಭವನೀಯ ಮೂರನೇ ಅಲೆ ಹಿನ್ನೆಲೆಯಲ್ಲಿ ಈಗಿನಿಂದಲೇ ಕಠಿಣ ನಿರ್ಧಾರ ಮಾಡಿದ್ದೇವೆ. ಜನರು ಸಹಕಾರ ಕೊಡಬೇಕು. ಗಡಿ ಪ್ರದೇಶಗಳಲ್ಲಿ ಮಾತ್ರ ಕಠಿಣ ನಿರ್ಬಂಧ ಮಾಡಿದ್ದೇವೆ. ಹಿಂದೆ ಕೊರೋನಾ ಜಾಸ್ತಿಯಾದಾಗ ಲಾಕ್ ಡೌನ್ ಮಾಡಿದ್ದೇವೆ ಆದರೆ ಮತ್ತೆ ಆ ರೀತಿ ಆಗಬಾರದು ಅನ್ನೋ ಕಾರಣಕ್ಕೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಈ ಕ್ರಮಗಳಿಂದ ಜನರಿಗೆ ಏನು ತೊಂದರೆ ಆಗುವುದಿಲ್ಲ. ಹೀಗಾಗಿ ಜನರು ಇದಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.