ನವದೆಹಲಿ, ಆ 07 (DaijiworldNews/PY): "ಕೊರೊನಾ ಸಾಂಕ್ರಾಮಿಕದ ವೇಳೆ ಸುಮಾರು 80 ಕೋಟಿ ಭಾರತೀಯರಿಗೆ ಉಚಿತ ಪಡಿತರ ವಿತರಿಸಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ವೀಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೊರೊನಾ ಸೋಂಕಿನ ಸಂದರ್ಭ ದೇಶದಾದ್ಯಂತ 80 ಕೋಟಿ ಮಂದಿಗೆ ಉಚಿತ ಪಡಿತರ ವಿತರಿಸಲಾಗಿದೆ. ಈ ಪೈಕಿ ಮಧ್ಯಪ್ರದೇಶದ ಐದು ಕೋಟಿ ಮಂದಿ ಸೇರಿದ್ದಾರೆ" ಎಂದಿದ್ದಾರೆ.
"ನೂರು ವರ್ಷಗಳಲಿ ಮನುಕುಲ ಕಾಣದಂತ ವಿಪತ್ತನ್ನು ಕೊರೊನಾ ಸೋಂಕು ತಂದೊಡ್ಡಿದೆ. ಇದರಿಂದ ರಕ್ಷಿಸಿಕೊಳ್ಳಲು ಜನರು ಮಾಸ್ಕ್, ಸಾಮಾಜಿಕ ಅಂತರ, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ತಿಳಿಸಿದ್ದಾರೆ.
"ಕೊರೊನಾದಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸು ಕಾರ್ಯತಂತ್ರದಲ್ಲಿ ಭಾರತವು ಬಡವರಿಗೆ ಪ್ರಥಮ ಆದ್ಯತೆ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಥವಾ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ ಸೇರಿದಂತೆ ಯಾವುದೇ ಯೋಜನೆಯಲ್ಲಿ ಬಡವರ ಆಹಾರ ಹಾಗೂ ಉದ್ಯೋಗದ ಬಗ್ಗೆ ಮೊದಲ ಆದ್ಯತೆ ನೀಡಿದ್ದೇವೆ" ಎಂದಿದ್ದಾರೆ.
"ಹಬ್ಬ ಸೇರಿದಂತೆ ವಿವಾಹದಂತಹ ಶುಭ ಸಮಾರಂಭಗಳಲ್ಲಿ ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸಲು ಮುಂದಾಗುವ ಮುಖೇನ ಆ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ನೆರವಾಗಬೇಕು" ಎಂದು ತಿಳಿಸಿದ್ದಾರೆ.