ಬಳ್ಳಾರಿ, ಆ 07 (DaijiworldNews/PY): ಸಿಎಂ ಬೊಮ್ಮಾಯಿ ತಮ್ಮ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಅಸಮಾಧಾನ ಹೊರಹಾಕಿರುವ ಆನಂದ್ ಸಿಂಗ್, "ತಮ್ಮ ಖಾತೆ ಬದಲಿಸದಿದ್ದಲ್ಲಿ ರಾಜೀನಾಮೆ ನೀಡಿ, ಶಾಸಕನಾಗಿ ಉಳಿಯುವ ಕುರಿತು ಚಿಂತಿಸಲಾಗುವುದು" ಎಂದಿದ್ದಾರೆ.
"ಯಾವ ಖಾತೆ ಬೇಕೆನ್ನುವುದನ್ನು ನಾನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೇಳಿದ್ದು, ನನ್ನ ಮನವಿಯನ್ನು ಪರಿಗಣಿಸುವುದಾಗಿ ತಿಳಿಸಿದ್ದರು. ಆದರೆ, ಇದೀಗ ಬೇರೆ ಖಾತೆ ನೀಡಲಾಗಿದೆ. ಹಾಗಾಗಿ ನನಗೆ ಅಸಮಾಧಾನವಾಗಿರುವ ಸತ್ಯ" ಎಂದು ತಿಳಿಸಿದ್ದಾರೆ.
"ನಾನು ಕೇಳಿದ್ದ ಖಾತೆ ಸಿಗಬಹುದು ಎನ್ನುವ ಉತ್ಸಾಹದಲ್ಲಿದ್ದೆ. ಆದರೆ, ನನಗೆ ಬೇರೆ ಖಾತೆ ನೀಡಿದ್ದಾರೆ. ಮಾಜಿ ಸಿಎಂ ಬಿಎಸ್ವೈ ಅವರನ್ನು ಇನ್ನೊಮ್ಮೆ ಭೇಟಿ ಮಾಡಿ ಮನವಿ ಮಾಡುತ್ತೇನೆ. ಒಂದು ವೇಳೆ ಮನವಿಗೆ ಸ್ಪಂದಿಸಿ ಖಾತೆ ಬದಲಿಸದೇ ಇದ್ದಲ್ಲಿ ಶಾಸಕನಾಗಿ ಉಳಿಯುವ ಬಗ್ಗೆ ಆಲೋಚಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
"ಖಾತೆ ನೀಡಿದ ಬಗ್ಗೆ ನನಗೆ ಅಸಮಾಧಾನವಿದೆ. ಆದರೆ, ಮಾಧ್ಯಮಗಳ ಮುಂದೆ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಯಾವುದೇ ಸಮಸ್ಯೆ ಇದ್ದರೂ ಪಕ್ಷದೊಳಗೆ ಸರಿಪಡಿಸಿಕೊಳ್ಳುತ್ತೇವೆ" ಎಂದಿದ್ದಾರೆ.
"ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನೇ ಕಾರಣ. ಏಕೆಂದರೆ, 2019ರಲ್ಲಿ ಮೊದಲು ರಾಜೀನಾಮೆ ನೀಡಿದ್ದು ನಾನೇ. ಎಂಟು ದಿನಗಳ ನಂತರ ಒಬ್ಬೊಬ್ಬರಾಗಿ ರಾಜೀನಾಮೆ ನೀಡುತ್ತಾ ಬಂದರು. ಇದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ವಿಚಾರವನ್ನು ವರಿಷ್ಠರು ಗಮನದಲ್ಲಿರಿಸಿಕೊಂಡು ಖಾತೆ ಹಂಚಿಕೆ ಮಾಡಬೇಕಾಗಿತ್ತು" ಎಂದು ತಿಳಿಸಿದ್ದಾರೆ.
"ಸಿಎಂ ಅವರ ಬಳಿ ಇಂಧನ ಹಾಗೂ ಲೋಕೋಪಯೋಗಿ ಖಾತೆ ನೀಡುವಂತೆ ಮನವಿ ಮಾಡಿದ್ದೆ" ಎಂದು ಆಪ್ತರ ಬಳಿ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿಕೊಂಡಿದ್ದಾರೆ.