ಬೆಂಗಳೂರು, ಆ 07 (DaijiworldNews/PY): "ಬದಲಾವಣೆಯ ಉದ್ದೇಶದಿಂದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬದಲಾವಣೆ ತರುವ ಸಲುವಾಗಿ ಖಾತೆಗಳ ಹಂಚಿಕೆ ಮಾಡಲಾಗಿದ್ದು, ಸಚಿವರು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
"ಖಾತೆ ಹಂಚಿಕೆ ಬಗ್ಗೆ ಅಸಮಾಧಾನ ಹೊಂದಿರುವ ಎಲ್ಲರನ್ನು ಕರೆದು ಮಾತನಾಡುತ್ತೇನೆ" ಎಂದಿದ್ದಾರೆ.
ಹೆಚ್.ಡಿ ದೇವೇಗೌಡರ ಮಾತು ಕೇಳಿ ನನಗೆ ಖಾತೆ ನೀಡಿಲ್ಲ ಎನ್ನುವ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಯಾರ ಮಾತು ಕೇಳಿ ಯಾರಿಗೂ ಖಾತೆ ತಪ್ಪಿಸಿಲ್ಲ" ಎಂದು ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆ ಮಾಡಿದ ಎರಡು ದಿನದ ಬಳಿಕ ಇದೀಗ ಖಾತೆ ಹಂಚಿಕೆ ಯಶಸ್ವಿಯಾಗಿ ಮಾಡಿದ್ದು,ಹೈಕಮಾಂಡ್ನಿಂದ ಅಧಿಕೃತವಾಗಿ ಅನುಮೋದನೆಗೊಂಡ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಪ್ರಮುಖ ಖಾತೆಗಳಾದ ಹಣಕಾಸು, ಬೆಂಗಳೂರು ಅಭಿವೃದ್ದಿ ಖಾತೆಗಳನ್ನು ಸಿಎಂ ಬೊಮ್ಮಾಯಿ ತನ್ನಲ್ಲೇ ಇರಿಸಿಕೊಂಡಿದ್ದಾರೆ. ಸುನಿಲ್ ಕುಮಾರ್, ಬಿ. ಸಿ. ನಾಗೇಶ್ ಸೇರಿ ಮೊದಲ ಬಾರಿಗೆ ಸಚಿವರಾದ ಹಲವರಿಗೆ ಪ್ರಮುಖ ಖಾತೆಯ ಜವಾಬ್ದಾರಿ ವಹಿಸಲಾಗಿದೆ.