ಮುಂಬೈ, ಆ 07 (DaijiworldNews/PY): "ಬಾಂಬ್ ಇಟ್ಟಿರುವ ಬಗ್ಗೆ ಅನಾಮಧೇಯ ಕರೆ ಬಂದ ಹಿನ್ನೆಲೆ ಮುಂಬೈನ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳು ಹಾಗೂ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಂಗಲೆಗೆ ಭದ್ರತೆ ಹೆಚ್ಚಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
"ಬಾಂಬ್ ನಿಷ್ಕ್ರಿಯ ದಳ ನಾಲ್ಕೂ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರೂ ಕೂಡಾ, ಯಾವುದೇ ಅನುಮಾನಾಸ್ಪದ ವಸ್ತುಗಳ ಕಂಡುಬಂದಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಬಾಂಬ್ ಇಟ್ಟಿರುವ ಬಗ್ಗೆ ಕರೆ ಬಂದ ತಕ್ಷಣವೇ ರೈಲ್ವೆ ಭದ್ರತಾ ದಳ ಸೇರಿದಂತೆ ರೈಲ್ವೆ ಪೊಲೀಸರು, ನಿಷ್ಕ್ರಿಯ ದಳ, ಬಾಂಬ್ ಪತ್ತೆ, ಶ್ವಾನದಳ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಶೋದ ನಡೆಸಿದ್ದರು" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
"ಶುಕ್ರವಾರ ರಾತ್ರಿ ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಬೈಕುಲ್ಲಾ, ದಾದರ್ ರೈಲ್ವೆ ನಿಲ್ದಾಣ ಹಾಗೂ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆಗೆ ಬಾಂಬ್ ಇರಿಸಿರುವುದಾಗಿ ಹೇಳಿದ್ದರು" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
"ಈವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ, ಸ್ಥಳದಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ತನಿಖೆ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.